ಬೆಳಗಾವಿ: ನಗರದ ಶಹಾಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮನೆಯೊಂದರ ಬೀಗ ಮುರಿದು ಕಳ್ಳತನ ಮಾಡುತ್ತಿದ್ದ ದೆಹಲಿ ಮೂಲದ ಆರೋಪಿಯನ್ನು ಪೊಲೀಸರು ಬಂಧಿಸಿ, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಘಟನೆಯ ವಿವರ:
ಶಹಾಪುರ ಭಾರತನಗರದ ನಿವಾಸವೊಂದರಲ್ಲಿ ಕಳ್ಳತನ ನಡೆಯುತ್ತಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಸ್ಥಳದಲ್ಲೇ ಆರೋಪಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯು ಮನೆಯ ಬೀಗ ಮುರಿದು ಒಳನುಗ್ಗಿ ಚಿನ್ನಾಭರಣಗಳನ್ನು ಕಳ್ಳತನ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಜಪ್ತಿ ಮಾಡಿದ ವಸ್ತುಗಳು:
ಬಂಗಾರ: 294.190 ಗ್ರಾಂ ತೂಕದ ಚಿನ್ನ (ಅಂದಾಜು ಮೌಲ್ಯ: ₹44,86,390/-)
ವಾಹನ: ಕಳ್ಳತನಕ್ಕೆ ಬಳಸಿದ್ದ ಹೋಂಡಾ ಆಕ್ಟಿವಾ ಮೋಟಾರ್ ಸೈಕಲ್ (ಮೌಲ್ಯ: ₹70,000/-)
ಒಟ್ಟು ಮೊತ್ತ: ಸುಮಾರು ₹45,56,390/- ಬೆಲೆಯ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಯ ಗುರುತು:
ಬಂಧಿತ ವ್ಯಕ್ತಿಯನ್ನು ಹೊಸ ದೆಹಲಿಯ ತಿಲಕ್ ನಗರ ನಿವಾಸಿ ಮಿಂಟು ವಿಶ್ವಾಸ @ ಚಿಂಟು (52 ವರ್ಷ) ಎಂದು ಗುರುತಿಸಲಾಗಿದೆ. ಈತನ ಮೇಲೆ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ (ಅ.ಸಂಖ್ಯೆ: 42/2026) ದಾಖಲಾಗಿದೆ.
ತನಿಖಾ ತಂಡ:
ಬೆಳಗಾವಿ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ, ಶಹಾಪುರ ಇನ್ಸ್ಪೆಕ್ಟರ್ ಶ್ರೀ ಎಸ್.ಎಸ್. ಸಿಮಾನಿ ಅವರ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ. ತಂಡದಲ್ಲಿ ಪಿ.ಎಸ್.ಐ ಗಳಾದ ಮಣಿಕಂಠ ಪೂಜಾರಿ, ಪ್ರವೀಣ ಬಿರಾದಾರ, ಮಂಜುನಾಥ ಭಜಂತ್ರಿ ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು. ಪೊಲೀಸರ ಈ ಸಮಯಪ್ರಜ್ಞೆ ಮತ್ತು ಕಾರ್ಯಕ್ಷಮತೆಯನ್ನು ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.
ವರದಿ: ಮಹಾಂತೇಶ್ ಎಸ್ ಹುಲಿಕಟ್ಟಿ


