ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಸಾಲಗುಂದ ಗ್ರಾಮದಲ್ಲಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಕೊರತೆ ತೀವ್ರ ಸ್ವರೂಪ ಪಡೆದುಕೊಂಡಿದೆ.
ಸಿಲಿಂಡರ್‌ಗಾಗಿ ಸಾರ್ವಜನಿಕರು ಹಾಗೂ ಮಹಿಳೆಯರು ಕಳೆದ ಎರಡು ಹಗಲು ಮತ್ತು ಎರಡು ರಾತ್ರಿಗಳಿಂದ ಗ್ಯಾಸ್ ಏಜೆನ್ಸಿ ಮುಂದೆ ಸಾಲುಗಟ್ಟಿ ಕಾಯುವ ದುಸ್ಥಿತಿ ನಿರ್ಮಾಣವಾಗಿದೆ.
ಕಳೆದ ನಾಲ್ಕು ದಿನಗಳಿಂದ ಗ್ರಾಮದಲ್ಲಿ ಗ್ಯಾಸ್ ಸರಬರಾಜು ಸಂಪೂರ್ಣ ವ್ಯತ್ಯಯಗೊಂಡಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಚಾಪೆ, ದಿಂಬು ಹಿಡಿದು ಫುಟ್‌ಪಾತ್‌ನಲ್ಲೇ ವಾಸ್ತವ್ಯ!
ಗ್ಯಾಸ್ ಸಿಲಿಂಡರ್ ಪಡೆಯಲು ಗ್ರಾಮಸ್ಥರು ಪಡುತ್ತಿರುವ ಪಾಡು ನಿಜಕ್ಕೂ ಮರುಕ ಹುಟ್ಟಿಸುವಂತಿದೆ.
ಸಿಲಿಂಡರ್ ಖಾಲಿಯಾಗಿ ಮನೆಯಲ್ಲಿ ಒಲೆ ಉರಿಯದ ಕಾರಣ, ಗ್ರಾಮಸ್ಥರು ಅನಿವಾರ್ಯವಾಗಿ ತಮ್ಮ ಮನೆಗಳಿಂದ ಚಾಪೆ, ದಿಂಬು, ಚಾದರ್ ಹಾಗೂ ಖಾಲಿ ಸಿಲಿಂಡರ್‌ಗಳನ್ನು ಹಿಡಿದುಕೊಂಡು ಗ್ಯಾಸ್ ಏಜೆನ್ಸಿ ಎದುರು ಜಮಾಯಿಸುತ್ತಿದ್ದಾರೆ.
ಹಗಲಿಡೀ ಬಿಸಿಲಿನಲ್ಲಿ ಕಾಯುವ ಸಾರ್ವಜನಿಕರು, ರಾತ್ರಿಯಾಗುತ್ತಿದ್ದಂತೆ ಏಜೆನ್ಸಿ ಅಂಗಡಿಯ ಮುಂಭಾಗದ ಫುಟ್‌ಪಾತ್ ಹಾಗೂ ರಸ್ತೆ ಬದಿಯಲ್ಲೇ ಮಲಗಿ ರಾತ್ರಿ ಕಳೆಯುತ್ತಿದ್ದಾರೆ.


