ಬಾಗಲಕೋಟೆ : ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸಂಪುಟವಿಸ್ತರಣೆ ಮತ್ತು ಖಾತೆ ಹಂಚಿಕೆ ವಿಚಾರವಾಗಿ ಆಡಳಿತ ಪಕ್ಷದೊಳಗೆ ತೀವ್ರ ಅಸಮಾಧಾನ ಹೊಗೆಯಾಡುತ್ತಿದ್ದು ಇದೀಗ ಮಾಜಿ ಸಚಿವ ಮುಧೋಳ ಶಾಸಕ ಆರ್ ಬಿ ತಿಮ್ಮಾಪುರ ಹಾಗೂ ಬಾಗಲಕೋಟೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್ ಜಿ ನಂಜಯ್ಯನಮಠ ಅವರದ್ದು ಎನ್ನಲಾದ ಆಡಿಯೋ ಸಂಭಾಷಣೆ ತೀವ್ರ ಸಂಚಲನ ಮೂಡಿಸಿದೆ. ವೈರಲ್ ಆಗಿರುವ ಆಡಿಯೋದಲ್ಲಿ ಕಾಂಗ್ರೆಸ್ ಹೈಕಮಾಂಡ್ ನಡೆ ಸಚಿವ ಸ್ಥಾನಗಳ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಪೇಮೆಂಟ್ ಸೀಟ್ ವ್ಯವಹಾರ ಹಾಗೂ ಹಿರಿಯ ನಾಯಕರನ್ನು ಕಡೆಗಣಿಸಿರುವ ಬಗ್ಗೆ ಇಬ್ಬರೂ ನಾಯಕರು ನಡೆಸಿದ್ದಾರೆ ಎನ್ನಲಾದ ಸಂಭಾಷಣೆ ಇಲ್ಲಿದೆ.
ಆಡಿಯೋ ಸಂಭಾಷಣೆಯಲ್ಲೇನಿದೆ?
ಆರ್ ಬಿ ತಿಮ್ಮಾಪುರ ಒಟ್ಟು ಪೇಮೆಂಟ್ ಸೀಟ್ ಅಲ್ಲಿ.
ಎಸ್ ಜಿ ನಂಜಯ್ಯನಮಠ: 70 ಪರ್ಸೆಂಟ್ ಇಂದ 75 ಪರ್ಸೆಂಟ್ ಅದಾವಂತೆ ನೋಡ್ರಿ ಹೆಚ್ಚು ಕಡಿಮೆ ನಮ್ಮ ಮಾಹಿತಿ ಪ್ರಕಾರ 80 ಪರ್ಸೆಂಟ್ ಆದರೂ ಆಗಬಹುದು
ಆರ್ ಬಿ ತಿಮ್ಮಾಪುರ: 80 ಅಂತ ಹೇಳ್ತಿರಿ ಪಟ್ಟಣಶೆಟ್ಟಿಗೆ ಕೊಟ್ಟಿದ್ದಾರಂತೆ.
ಎಸ್ ಜಿ ನಂಜಯ್ಯನಮಠ: ಕೊಟ್ಟಿರಬಹುದು ಯಾಕಂದ್ರೆ ಇದು ಇತ್ತಲ್ಲ ಅವರ ಮೇಲೆ ವಿಧಾನಸೌಧದಲ್ಲಿ ದುಡ್ಡು ಸಿಕ್ಕಿದ್ದು.
ಆರ್ ಬಿ ತಿಮ್ಮಾಪುರ: ಅಂತವರು ರಗಡ ಬಂದವರು ಇದಾರೆ.
ಎಸ್ ಜಿ ನಂಜಯ್ಯನಮಠ: ಆ ಬಿ ನಾಗೇಂದ್ರ ಅವರಿಗೆ ಕೊಟ್ಟಾರಲ್ಲಾ ಏನ್ರಿ ಇದು ದುರಂತ ನಾಗೇಂದ್ರ ಇನ್ನು ಕೇಸ್‌ನಲ್ಲಿ ನಿರ್ದೋಶಿ ಇಲ್ಲ ಬರೆ ಜಾಮೀನು ಐತಿ ಅಂತವರಿಗೆ ಕೊಟ್ರೆ ಹೆಂಗ್ರಿ? ನಾಳೆ ಏನಂತ ಪಾರ್ಟಿ ಎದುರಿಸೋದು ಹೇಳ್ರಿ ಪಾರ್ಟಿ ಏನು ಅಂತ ಎದುರಿಸಬೇಕು ನಾವು?
ಆರ್ ಬಿ ತಿಮ್ಮಾಪುರ: ಎಚ್ ಕೆ ಪಾಟೀಲ ಏನ ತಪ್ಪು ಮಾಡಿದ್ದಾರೆ?
ಎಸ್ ಜಿ ನಂಜಯ್ಯನಮಠ: ಪಾಪ ಅವರು ಇವರು ಕೇಳಿದಷ್ಟು ರೊಕ್ಕ ಕೊಟ್ಟಿರಲಿಕ್ಕಿಲ್ಲ! ಇಮೇಜ್ ಪಾರ್ಟಿ ಇಮೇಜು ಯಾವ ಖಾತೆ ಕೊಟ್ರು ಸಮರ್ಥವಾಗಿ ನಿರ್ವಹಣೆ ಮಾಡಿದ್ದಾರೆ ನೀರಾವರಿ ಇಲಾಖೆ ಇರಲಿ ಬೇರೆ ಇರಲಿ.
ಆರ್ ಬಿ ತಿಮ್ಮಾಪುರ: ಅಸೆಂಬ್ಲಿಯಲ್ಲಿ ಉತ್ತರ ಹೇಗೆ ಕೊಡುತ್ತಿದ್ದರು…
ಎಸ್ ಜಿ ನಂಜಯ್ಯನಮಠ: ಬಹಳ ಸ್ಮೂತ್ ಆಗಿ ಪಾಪ…
ಆರ್ ಬಿ ತಿಮ್ಮಾಪುರ: ಸುನಿಲ್ ಕಂದಗೋಲ್ ಅಂದ್ರೆ ಯಾರು?
ಎಸ್ ಜಿ ನಂಜಯ್ಯನಮಠ: ಇವು ಒಂದು ನಮೂನೆ ಹುಚ್ಚರಿದ್ದಂಗೆ ಇದಾವರಿ ಮೇಲೆ (ಹೈಕಮಾಂಡ್) ಮೇಲೆ ಹುಚ್ಚರು ಅದಾವ ನಾನು ಹಿಂದೊಮ್ಮೆ ಪ್ರಾಮಾಣಿಕತೆಯಿಂದ ದಕ್ಷತೆಯಿಂದ ಕೆಲಸ ಮಾಡ್ತಾರೆ ಅಂತ ಹೇಳಿ ಎಚ್ ಕೆ ಪಾಟೀಲ ಸಂಬಂಧ ವೇಣುಗೋಪಾಲ ಅವರ ಮುಂದೆ ಹೇಳಿದ್ರೆ ನಾವು ಹೈಕಮಾಂಡ್‌ನವರು ಪ್ರಾಮಾಣಿಕವಾಗಿ ಇರು ಅಂತ ಹೇಳಿದ್ದೇವಾ ಅಂತ ನನ್ನ ಕೇಳಿದ ಅವ.
ಎಸ್ ಜಿ ನಂಜಯ್ಯನಮಠ: ಸಿ ಆರ್ ಪಾಟೀಲ ಹಿಂಡಸಗೇರಿ ನಾನು ಜಕ್ಕಪ್ಪನವರ ಏನ್ರೀ ಐದಾರು ಮಂದಿ ಅದವಿ ನನ್ನ ಮಾತನಾಡೋಕೆ ಹಚ್ಚಿದರು ನಾನು ಮಾತನಾಡಿದೆ. ಅವಾಗ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗೊ ಮುಂಚೆ ಸಮ್ಮಿಶ್ರ ಸರ್ಕಾರ ಇದ್ದಾಗ ಪ್ರಾಮಾಣಿಕರ ಆಗು ಅಂತ ಯಾರಂದ್ರು ಅಂದ ಅವನು. ಇನ್ನು ಇದಕ್ಕೆ ಏನು ಉತ್ತರ ಕೊಡುತ್ತೀರಿ ಹೇಳ್ರಿ ನಿನಗೆ ಪಟಿಂಗ ಆಗು ಅಂತ ಹೇಳಿದ್ದು ನಾವು ನೀನ್ಯಾಕೆ ಗೃಹಸ್ಥ ಆದೆ ಅಂದಂಗಾಯ್ತು.
ಎಸ್ ಜಿ ನಂಜಯ್ಯನಮಠ: ನಿಮ್ಮದೊಂದು ಆಗಿದ್ರೆ ನನಗೆ ನಿಮ್ಮದೊಂದು ಅವರ್ದೊಂದು (ಎಚ್ ಕೆ ಪಾಟಿಲ್) ಇತ್ತು ನನಗೆ ನಿಮಗೆ ಕೋಟಾ ಇತ್ತಲ್ಲ ನಾ ಏನು ಮಾಡುತ್ತಿದ್ದೆ ಫೀಡ್ ಮಾಡ್ತಿದ್ದೆ ಉತ್ತರ ಕರ್ನಾಟಕದ ಮಾದರ ಎಸ್ ಸಿ (ಎಡಗೈ) ಸೀಟ್ ಇಲ್ಲ ಎಕ್ಸ್ಪೀರಿಯನ್ಸು ಇದೆ ಮತ ಸಂಘಟನೆ ಮಾಡ್ಯಾನ ಅಂತ ಹೇಳತಿದ್ದೆ.
ಆರ್ ಬಿ ತಿಮ್ಮಾಪುರ: ಮುಂದಿಂದ ಕಷ್ಟ
ಎಸ್ ಜಿ ನಂಜಯ್ಯನಮಠ: ಮುಂದೆ ಕಷ್ಟ ಆಗುತ್ತೆ. ಅವರೇ ಏನು ಮಾಡ್ತಾರೆ ಜಾತ್ರೆ ಮಾಡಿಕೊಂಡು ಹೋಗಿಬಿಡುತ್ತಾರ ಬೈ ರೋಡ್ ಹೊಂಟೀರಿನ ನಾಲ್ಕು ದಿವಸ ಇರ್ತೀರಲ್ಲ ಅಲ್ಲೇ.
ಆರ್ ಬಿ ತಿಮ್ಮಾಪುರ: ಇರ್ತೀನಿ ನಾಲ್ಕೈದು ದಿನ ಇದು ಏನ್ರೀ ಇದು ಮಿನಿಸ್ಟರ್ ಮಾಡೋದು
ಎಸ್ ಜಿ ನಂಜಯ್ಯನಮಠ: ಬೇಜಾರ ಅದನ್ನು ಇನ್ನು ನೋಡಬೇಕಲ್ಲ ನಾವೆಲ್ಲ ಕಣ್ಣಲೆ.
ಆರ್ ಬಿ ತಿಮ್ಮಾಪುರ: ನಾವು ನಾಲ್ಕು ಮಂದಿ ಎಮ್‌ಎಲ್‌ಎಗಳು ಬರೆದು ಕೊಡುತ್ತೇವೆ.
ಎಸ್ ಜಿ ನಂಜಯ್ಯನಮಠ: ಅವರು ಮಾಡಿದ್ರೆ ಇವರು ಏನು ಮಾಡೋಕಾಗುತ್ತೆ ಶಿವಕುಮಾರ ಒಬ್ರು ಮಾತಾಡೋದು ನೀವ್ ಬರೆದುಕೊಡೋದು ಮಾಡ್ರಿ ಮೊದಲು.
ಆರ್ ಬಿ ತಿಮ್ಮಾಪುರ: ಸಹಿ ಮಾಡಿದೆ ನಾನು ಚಿಮ್ಮನಕಟ್ಟಿ ಒಬ್ಬವ
ಸಚಿವ ಸ್ಥಾನ ಹಂಚಿಕೆಯಲ್ಲಿ ಶೇ 80 ರಷ್ಟು ಪೇಮೆಂಟ್ ಆಧಾರದಲ್ಲೇ ಸೀಟುಗಳನ್ನು ನೀಡಲಾಗಿದೆ ಎಂದು ನಾಯಕರು ಆರೋಪಿಸಿದ್ದಾರೆ ಹೈಕಮಾಂಡ್ ನಡವಳಿಕೆ ಹಾಗೂ ಸಚಿವ ಸಂಪುಟ ಆಯ್ಕೆ ಖಂಡಿಸಿ ನಾಲ್ಕಕ್ಕೂ ಹೆಚ್ಚು ಶಾಸಕರು ದೂರು ಪತ್ರ ಬರೆಯಲು ನಿರ್ಧರಿಸಿದ್ದು, ಆರ್ ಬಿ ತಿಮ್ಮಾಪುರ ಹಾಗೂ ಚಿಮ್ಮನಕಟ್ಟಿ ಈಗಾಗಲೇ ಸಹಿ ಮಾಡಿದ್ದಾರೆ ಎನ್ನಲಾಗಿದೆ ಈ ವೈರಲ್ ಸಂಭಾಷಣೆ ರಾಜ್ಯ ಕಾಂಗ್ರೆಸ್‌ನಲ್ಲಿ ಆಂತರಿಕ ಭಿನ್ನಮತವನ್ನು ಮತ್ತೆ ಬೀದಿಗೆ ತಂದಿದ್ದು ಪ್ರತಿಪಕ್ಷಗಳಿಗೆ ಹೊಸ ಪ್ರಹಾರ ಮಾಡಲು ಅಸ್ತ್ರ ಸಿಕ್ಕಂತಾಗಿದೆ.
ವರದಿ : ಬಸವರಾಜ ಪೂಜಾರಿ


