ಮುಂಡಗೋಡ: ಉತ್ತರ ಕನ್ನಡ ಜಿಲ್ಲಾ ನೂತನ ಉಸ್ತುವಾರಿ ಹಾಗೂ ಸಂಪುಟ ದರ್ಜೆ ಸಚಿವ ಲಕ್ಷ್ಮಣ ಸವದಿ ಅವರ ಅಧ್ಯಕ್ಷತೆಯಲ್ಲಿ ಮುಂಡಗೋಡ ತಾಲೂಕು ಪ್ರವಾಸಿ ಮಂದಿರದಲ್ಲಿ ಇಂದು ಅತಿವೃಷ್ಟಿ ಮತ್ತು ಅನಾವೃಷ್ಟಿ ಪರಿಸ್ಥಿತಿ ಕುರಿತು ಮಹತ್ವದ ಸಭೆ ನಡೆಸಿದರು.
ಬನವಾಸಿ, ಮುಂಡಗೋಡ ಹಾಗೂ ಯಲ್ಲಾಪುರ ಸೇರಿದಂತೆ ವಿವಿಧ ತಾಲೂಕುಗಳಲ್ಲಿನ ಮಳೆಹಾನಿ, ಮಳೆ ಕೊರತೆ, ಬೆಳೆಹಾನಿ, ಮಳೆ ಪ್ರಮಾಣ ಹಾಗೂ ರೈತರಿಗೆ ನೀಡಲಾಗುತ್ತಿರುವ ಪರಿಹಾರ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಸಚಿವರು ಮಾಹಿತಿ ಪಡೆದರು.
ಇದೇ ವೇಳೆ ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರದ ಲಭ್ಯತೆ ಹಾಗೂ ವಿತರಣೆ ಪ್ರಮಾಣದ ಬಗ್ಗೆಯೂ ಅಧಿಕಾರಿಗಳಿಂದ ಮಾಹಿತಿ ಪಡೆದು, ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಸಭೆಯಲ್ಲಿ ಶಾಸಕ ಭೀಮಣ್ಣ ನಾಯ್ಕ್ ಹಾಗೂ ಯಲ್ಲಾಪುರ–ಮುಂಡಗೋಡ ಶಾಸಕ ಶಿವರಾಮ ಹೆಬ್ಬಾರ್ ಅವರು ಸಕ್ರಿಯವಾಗಿ ಪಾಲ್ಗೊಂಡು ತಮ್ಮ ಕ್ಷೇತ್ರಗಳ ಪ್ರಮುಖ ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತಂದರು.
ರೈತರು ಹಾಗೂ ಸಾರ್ವಜನಿಕರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳು ಮತ್ತು ಕ್ಷೇತ್ರದ ತುರ್ತು ಅಗತ್ಯಗಳ ಕುರಿತು ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತು. ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಚಿವ ಲಕ್ಷ್ಮಣ ಸವದಿ ಅವರು ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್, ಉಪವಿಭಾಗಾಧಿಕಾರಿ ಚಂದ್ರಶೇಖರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ :ರಮೇಶ್ ತಾಳಿಕೋಟಿ


