ಕಟ್ಟಡದ ಮೂರನೇ ಮಹಡಿಯಿಂದ ಬಿದ್ದ ವೇಳೆ ಕಬ್ಬಿಣದ ಸರಳು ಬಾಲಕನ ಭುಜದ ಮೂಲಕ ಹೊಕ್ಕು ಬಾಯಿಯಿಂದ ಹೊರಬಂದರೂ (Shocking) 13 ವರ್ಷದ ಬಾಲಕ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಗುಜರಾತ್‌ನ (Gujarat) ಸೂರತ್‌ನಲ್ಲಿ (Surat) ನಡೆದಿದೆ.
ಗಂಭೀರವಾಗಿ ಗಾಯಗೊಂಡ ಬಾಲಕನಿಗೆ ವೈದ್ಯರು ಸತತ ಒಂದು ಗಂಟೆ ಶಸ್ತ್ರಚಿಕಿತ್ಸೆ ನಡೆಸಿ ಕಬ್ಬಿಣದ ಸರಳನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ.
ಬಿಹಾರ ಮೂಲದ ನಜೀಶ್ ಸೂರತ್‌ನ ದಾರುಲ್ ಉಲೂಮ್ ಮೆಹ್ಮುದಿಯಾ ಮದರಸಾದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ.
ತರಗತಿಗಳು ಮುಗಿದ ಬಳಿಕ ಸ್ನೇಹಿತರೊಂದಿಗೆ ಸಮೀಪದ ಮಸೀದಿಯ ಮೂರನೇ ಮಹಡಿಯಲ್ಲಿ ಆಟವಾಡಲು ತೆರಳಿದ್ದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ.
ಮಸೀದಿಯ ಮೇಲಿನ ಭಾಗದಿಂದ ಪಕ್ಕದಲ್ಲೇ ನಿರ್ಮಾಣ ಹಂತದಲ್ಲಿದ್ದ ಕಟ್ಟಡಕ್ಕೆ ಜಿಗಿಯಲು ಬಾಲಕ ಪ್ರಯತ್ನಿಸಿದ್ದಾನೆ. ಈ ವೇಳೆ ಕಾಲು ಜಾರಿ ಕೆಳಗೆ ಬಿದ್ದಿದ್ದಾನೆ.
ಕಟ್ಟಡದ ಬಳಿ ಹೊರಗೆ ಚಾಚಿಕೊಂಡಿದ್ದ ಕಬ್ಬಿಣದ ಸರಳಿನ ಮೇಲೆ ಬಾಲಕ ಬಿದ್ದ ಪರಿಣಾಮ ಅದು ಭುಜದ ಭಾಗದಿಂದ ದೇಹವನ್ನು ಸೀಳಿ ಬಾಯಿಯ ಮೂಲಕ ಹೊರಬಂದಿದೆ.
ಘಟನೆ ಕಂಡ ಸ್ಥಳೀಯರು ತಕ್ಷಣ ಕಾರ್ಯಪ್ರವೃತ್ತರಾಗಿದ್ದಾರೆ. ಬಾಲಕನ ಬಾಯಿಯಿಂದ ಹೊರಚಾಚಿದ್ದ ಸರಳನ್ನು ಸ್ಥಳದಲ್ಲೇ ಕತ್ತರಿಸಿ, ಉಳಿದ ಭಾಗದೊಂದಿಗೆ ಆತನನ್ನು ಸೂರತ್ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ತುರ್ತು ಚಿಕಿತ್ಸಾ ವಿಭಾಗದಲ್ಲಿ ವೈದ್ಯರು ಬಾಲಕನ ಸ್ಥಿತಿ ಸ್ಥಿರಗೊಳಿಸಿದ ಬಳಿಕ ಆಂತರಿಕ ಗಾಯಗಳ ಪರಿಶೀಲನೆಗಾಗಿ ತಕ್ಷಣ ಸಿಟಿ ಸ್ಕ್ಯಾನ್ ನಡೆಸಿದ್ದಾರೆ.


