ಸಿರುಗುಪ್ಪ : ತಾಲೂಕಿನಲ್ಲಿ ಹಲವಾರು ವರ್ಷಗಳಿಂದ ಅಕ್ರಮ ಭೂ ಮಾಪಿಯಾದಲ್ಲಿ ತೊಡಗಿರುವ ಉಪ ನೋಂಧಣಾಧಿಕಾರಿ ಯಲ್ಲಾರೆಡ್ಡೆಪ್ಪ ಅವರನ್ನು ತಕ್ಷಣವೇ ಬಂಧಿಸಬೇಕು.
ಹಲವಾರು ವರ್ಷಗಳಿಂದ ಸಾಗು ಮಾಡುತ್ತಿರುವ ರೈತರಿಗೆ ಜಮೀನಿನ ಪಟ್ಟಾ ಕೊಟ್ಟು ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘ ತಾಲೂಕು ಸಮಿತಿಯಿಂದ ನಗರದ ಮಹಾತ್ಮ ಗಾಂಧೀಜಿ ವೃತ್ತದಿಂದ ಜಿಲ್ಲಾ ಕಛೇರಿಯವರೆಗೆ ಪಾದಯಾತ್ರೆ ನಡೆಸಲಾಯಿತು.
ಸಿಐಟಿಯು ಜಿಲ್ಲಾ ಅಧ್ಯಕ್ಷ ಹೆಚ್.ತಿಪ್ಪಯ್ಯ ಅವರು ಮಾತನಾಡಿ ತಾಲೂಕಿನಲ್ಲಿ ತಾಲೂಕಿನ ನಂ.64 ಹಳೇಕೋಟೆ, ದೇಶನೂರು, ಕೆಂಚನಗುಡ್ಡ, ಅರಳಿಗನೂರು ಸಿರಿಗೇರಿ ಗ್ರಾಮಗಳಲ್ಲಿನ ಸುಮಾರು 850 ಎಕರೆಯ ಭೂಮಿಯನ್ನು ಇಲ್ಲಿನ ಭ್ರಷ್ಟ ಅಧಿಕಾರಿಗಳು ತಮ್ಮ ಸಂಬಂಧಿಕರ ಹೆಸರಿನಲ್ಲಿ ಪಟ್ಟಮಾಡಿಕೊಂಡು ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ.
ಹಲವಾರು ವರ್ಷಗಳಿಂದ ಸಾಗು ಮಾಡುತ್ತಿರುವ ಎಸ್.ಟಿ ಮತ್ತು ಎಸ್.ಸಿ ಜನಾಂಗದ ರೈತರು ಅಕ್ರಮ ಭೂಮಾಪಿಯಾದಲ್ಲಿನ ಅಧಿಕಾರಿಗಳು, ಅಕ್ರಮ ಆಸ್ತಿಯನ್ನು ನೋಂಧಣಿ ಮಾಡಿಕೊಂಡಿರುವ ವ್ಯಕ್ತಿಗಳಿಂದ ಕಿರುಕುಳಕ್ಕೆ ಒಳಗಾಗಿದ್ದಾರೆ.
ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ.
ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಆದ್ದರಿಂದ ರೈತ ಸಂಘ ಸೇರಿದಂತೆ ಇನ್ನಿತರ ಒಕ್ಕೂಟಗಳು ಸೇರಿಕೊಂಡು ಬಳ್ಳಾರಿಯ ಜಿಲ್ಲಾ ಮಟ್ಟದ ಅಧಿಕಾರಿಗಳ ಗಮನ ಸೆಳೆದು ಇಲ್ಲಿನ ಬಡ ರೈತರಿಗೆ ಜಮೀನಿನ ಪಟ್ಟಕೊಟ್ಟು ನ್ಯಾಯ ಒದಗಿಸಬೇಕೆಂಬ ಬೇಡಿಕೆಯೊಂದಿಗೆ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ.
ಅಕ್ರಮವಾಗಿ ಬೇನಾಮಿ ಆಸ್ತಿ ಮಾಡಿರುವ ಉಪನೋಂಧಣಾಧಿಕಾರಿ ಯಲ್ಲಾರೆಡ್ಡೆಪ್ಪ ಅವರ ಮೇಲೆ ಮೂರು ನಾಲ್ಕು ಪ್ರಕರಣಗಳಿದ್ದರೂ ಅವರನ್ನು ರಕ್ಷಣೆ ಮಾಡುತ್ತಿರುವ ಕಾಣದ ಕೈಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದರು.
ಇದೇ ವೇಳೆ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕಾಧ್ಯಕ್ಷ ವಿ.ಮಾರುತಿ, ಸಿಐಟಿಯು ಹಮಾಲಿ ಕಾರ್ಮಿಕರ ಸಂಘದ ತಾಲೂಕಾಧ್ಯಕ್ಷ ಹೆಚ್.ಬಿ.ಓಬಳೇಶ್ವರಪ್ಪ, ದಲಿತ ಹಕ್ಕುಗಳ ಸಮಿತಿ ಅಧ್ಯಕ್ಷ ಬಿ.ಎಲ್.ಈರಣ್ಣ, ಸೇರಿದಂತೆ ಇನ್ನಿತರ ಮುಖಂಡರು ಹಾಗೂ ರೈತರು ಇದ್ದರು.
ವರದಿ : ಶ್ರೀನಿವಾಸ ನಾಯ್ಕ.

