ಸಿರುಗುಪ್ಪ: ಪಟ್ಟಣದ ಎಲ್ಲಮ್ಮ ದೇವಿ ಶಾಲೆ ಆವರಣದಲ್ಲಿ ತಂಬಾಕು ಸೇವನೆಯ ಮಾರಕ ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಮತ್ತು ತಂಬಾಕು ಮುಕ್ತ ಸಮಾಜ ನಿರ್ಮಿಸುವ ಸಂಕಲ್ಪದೊಂದಿಗೆ ಇಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ‘ವಿಶ್ವ ತಂಬಾಕು ರಹಿತ ದಿನ’ವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ನಂತರ ಮಾತನಾಡಿದ ಹಾಸ್ಯ ಕಲಾವಿದ ಜೆ ನರಸಿಂಹಮೂರ್ತಿ ತಂಬಾಕು ಸೇವನೆಯು ಮಾನವನ ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿಯಾಗಿದ್ದು, ಇದು ಕ್ಯಾನ್ಸರ್, ಹೃದಯಾಘಾತ, ಶ್ವಾಸಕೋಶದ ಕಾಯಿಲೆಗಳು ಮತ್ತು ಪಾರ್ಶ್ವವಾಯು ಮುಂತಾದ ಮಾರಣಾಂತಿಕ ಕಾಯಿಲೆಗಳಿಗೆ ಪ್ರಮುಖ ಕಾರಣವಾಗಿದೆ. ತಂಬಾಕು ಬಳಸುವ ವ್ಯಕ್ತಿಯಷ್ಟೇ ಅಲ್ಲದೆ, ಅವರ ಸುತ್ತಮುತ್ತಲಿರುವವರ ಆರೋಗ್ಯದ ಮೇಲೆಯೂ ಇದು ದುಷ್ಪರಿಣಾಮ ಬೀರುತ್ತದೆ. ಯುವ ಸಮುದಾಯವು ಈ ದುಶ್ಚಟಕ್ಕೆ ಬಲಿಯಾಗದಂತೆ ತಡೆಯುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಸಂಸ್ಥೆಯ ಕೃಷಿ ಮೇಲ್ವಿಚಾರಕ ವೀರೇಶ ಸೋಮನಾಳ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗ್ರಾಮಗಳ ಅಭಿವೃದ್ಧಿ ಜೊತೆಗೆ ಸಮಾಜದ ಪಿಡುಗಗಳ ಬಗ್ಗೆ ಜಾಗೃತಿಯನ್ನು ಮೂಡಿಸಿ ಸ್ವಸ್ಥ ಸಮಾಜ ನಿರ್ಮಾಣ ಮಾಡುವುದಾಗಿದೆ.
ತಂಬಾಕು ನಿಯಂತ್ರಣಕ್ಕಾಗಿ ಸರ್ಕಾರಗಳು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದರೂ, ಸಾರ್ವಜನಿಕರ ವೈಯಕ್ತಿಕ ಜಾಗೃತಿ ಅತ್ಯಗತ್ಯ. ಪ್ರತಿಯೊಬ್ಬರೂ ತಂಬಾಕು ಉತ್ಪನ್ನಗಳನ್ನು ತ್ಯಜಿಸಿ, ಆರೋಗ್ಯಕರ ಮತ್ತು ಸ್ವಸ್ಥ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಯಲ್ಲಮ್ಮದೇವಿ ಶಾಲೆ ಅಧ್ಯಕ್ಷ ವೈ ಡಿ ವೆಂಕಟೇಶ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಪ್ರೀಯಾ, ಸೇವಾಪ್ರತಿನಿಧಿ ಲಕ್ಷ್ಮೀ, ತಸ್ಲೀಮ್, ಸಿ ಎಸ್ ಸಿ ಸೇವಾದಾರ ಶರೀಪ್, ತಬಸುಮ್, ಸಂಘದ ಸದಸ್ಯರು ಉಪಸ್ಥಿತರಿದ್ದರು.
ವರದಿ :ಶ್ರೀನಿವಾಸ ನಾಯ್ಕ


