ಬೈಲಹೊಂಗಲ: ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಕಾನೂನು ಸಾಕ್ಷರತಾ ಕ್ಲಬ್ ಅಡಿಯಲ್ಲಿ ಪೋಕ್ಸೋ ಕಾಯಿದೆ, ಬಾಲ್ಯವಿವಾಹ ನಿಷೇಧ ಕಾಯಿದೆ ಬಗ್ಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ವಕೀಲರಾದ ದುಂಡಪ್ಪ ಗರಗದ ಮಾತನಾಡಿ ಬಾಲ್ಯವಿವಾಹ ನಿಷೇಧ ಕಾಯಿದೆಯ ಬಗ್ಗೆ ವಿದ್ಯಾರ್ಥಿಗಳು ಅರಿತುಕೊಂಡು ಪಾಲಕರಲ್ಲಿಯೂ ಜಾಗೃತಿ ಮೂಡಿಸಲು ಮುಂದಾಗಬೇಕು ಎಂದರು. ಬಾಲ್ಯ ವಿವಾಹ ತಡೆಗಟ್ಟುವಲ್ಲಿ ಎಲ್ಲರೂ ಸಹಕರಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ವಕೀಲರಾದ ವಿಶ್ವನಾಥ ಪೂಜೇರ ಪೋಕ್ಸೋ ಕಾಯಿದೆಯ ಬಗ್ಗೆ ಮಾಹಿತಿ ನೀಡಿದರು. ಹೆಣ್ಣು ಮಕ್ಕಳಿಗೆ ಗುಡ್ ಟಚ್, ಬ್ಯಾಡ್ ಟಚ್ ಬಗ್ಗೆ ಅರಿವು ಇರಬೇಕು ಎಂದರು. ಸಮಸ್ಯೆಗಳನ್ನು ಧೈರ್ಯದಿಂದ ಪಾಲಕರಿಗೆ ತಿಳಿಸುವ ಮನೋಸ್ಥೈರ್ಯವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಅವರು ಹೇಳಿದರು. ಶಿಕ್ಷಕರಾದ ವಿಠ್ಠಲ ಕೋಟಗಾರ ಪ್ರಾಸ್ತಾವಿಕವಾಗಿ ಮಾತನಾಡಿ ಕಾನೂನುಗಳನ್ನು ಪಾಲಿಸುವ ಮತ್ತು ಗೌರವಿಸುವ ಮನೋಭಾವ ನಮ್ಮದಾಗಬೇಕು ಎಂದು ಹೇಳಿದರು.

ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕರಾದ ಎನ್.ಆರ್.ಠಕ್ಕಾಯಿ ಮಾತನಾಡಿ ಮಕ್ಕಳಿಗೆ ಅಕ್ಷರ ಜ್ಞಾನದ ಜೊತೆಗೆ ಕಾನೂನು ಸಾಕ್ಷರತೆಯೂ ಮುಖ್ಯವಾಗಿದೆ ಎಂದರು. ಶಾಲೆಯಲ್ಲಿ ಮಕ್ಕಳ ರಕ್ಷಣೆ ಮತ್ತು ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗಿದೆ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ವಿನಾಯಕ ಬಡಿಗೇರ, ಗ್ರಾಮಸ್ಥರಾದ ಮಂಜುನಾಥ ಸೊಗಲದ, ಗಂಗಪ್ಪ ಆಡಿನ, ಮಹಾಬಲೇಶ್ವರ ಸೂರ್ಯವಂಶಿ, ಮಲ್ಲಪ್ಪ ಮಡಿವಾಳರ, ದ್ಯಾಮಪ್ಪ ಜೋಗಿಗುಡ್ಡ, ಶಿಕ್ಷಕರಾದ ಜಗದೀಶ ನರಿ, ಪ್ರವೀಣ ಗುರುನಗೌಡರ, ಹೇಮಲತಾ ಪುರಾಣಿಕ, ಶಿವಾನಂದ ಬಳಿಗಾರ, ಎ.ಎಂ. ಬೇಪಾರಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರಶಿಕ್ಷಣಾರ್ಥಿ ಉದಯ ಸೊಗಲದ ನಿರೂಪಿಸಿದರು. ಶಿಕ್ಷಕಿಯರಾದ ಗಾಯತ್ರಿ ತುರಾದಿ ವಂದಿಸಿದರು.
ವರದಿ : ದುಂಡಪ್ಪ ಹೂಲಿ


