ಮುಂಬೈ: ಕಲಬೆರಕೆ ಹಾಗೂ ಕಳಪೆ ಗುಣಮಟ್ಟದ ಅಡುಗೆ ಎಣ್ಣೆ ಮಾರಾಟಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಮಹಾರಾಷ್ಟ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.
ಇನ್ನು ಮುಂದೆ ಅಂಗಡಿಗಳಲ್ಲಿ ಲೂಸ್ ಆಗಿ ಅಡುಗೆ ಎಣ್ಣೆ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಪ್ಯಾಕ್ ಮಾಡಿದ ಎಣ್ಣೆಯನ್ನೇ ಮಾರಾಟ ಮಾಡಬೇಕು ಎಂದು ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ (FDA) ಸೂಚಿಸಿದೆ.
ಎಣ್ಣೆ ಪ್ಯಾಕೆಟ್ ಅಥವಾ ಕಂಟೇನರ್ ಮೇಲೆ ಅದರ ಮೂಲ, ತಯಾರಿಕೆ ದಿನಾಂಕ, ಅವಧಿ ಮುಕ್ತಾಯ ದಿನಾಂಕ ಸೇರಿದಂತೆ ಅಗತ್ಯ ಮಾಹಿತಿಗಳು ಸ್ಪಷ್ಟವಾಗಿ ನಮೂದಿಸಿರಬೇಕು ಎಂದು FDA ತಿಳಿಸಿದೆ.
ಲೂಸ್ ಎಣ್ಣೆ ಮೇಲೆ ಏಕೆ ನಿರ್ಬಂಧ?
ಲೂಸ್ ಆಗಿ ಮಾರಾಟವಾಗುವ ಎಣ್ಣೆ ಎಲ್ಲಿ ತಯಾರಾಗಿದೆ, ಯಾವಾಗ ತಯಾರಿಸಲಾಗಿದೆ ಹಾಗೂ ಅದರ ಗುಣಮಟ್ಟ ಮತ್ತು ಅವಧಿ ಎಷ್ಟು ಎಂಬುದನ್ನು ಪತ್ತೆಹಚ್ಚುವುದು ಕಷ್ಟವಾಗುತ್ತದೆ.
ಆಹಾರ ವಿಷಬಾಧೆಯಂತಹ ಘಟನೆಗಳು ನಡೆದ ಸಂದರ್ಭದಲ್ಲಿ ಎಣ್ಣೆಯ ಮೂಲವನ್ನು ಪತ್ತೆಹಚ್ಚಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದೂ ಕಷ್ಟವಾಗುತ್ತದೆ.
ಹೀಗಾಗಿ ಗ್ರಾಹಕರ ಸುರಕ್ಷತೆ ಹಾಗೂ ಟ್ರೇಸಬಿಲಿಟಿ ದೃಷ್ಟಿಯಿಂದ ಪ್ಯಾಕ್ ಮಾಡಿದ ಅಡುಗೆ ಎಣ್ಣೆ ಮಾರಾಟಕ್ಕೆ ಆದ್ಯತೆ ನೀಡಲಾಗಿದೆ.


