ಬೆಳಗಾವಿ: ಪ್ರೀತಿ (love) ನಿರಾಕರಿಸಿದ್ದಕ್ಕೆ ಬಾಲಕಿಯನ್ನು (16) ಕೊಲೆಗೈದವನಿಗೆ (brutally murdered) ಚಿಕ್ಕೋಡಿಯ 7ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
2021ರ ಆಗಸ್ಟ್ 1 ರಂದು ಹಾರೂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿ ತನ್ನ ತಂಗಿಯರು ಹಾಗೂ ಗೆಳತಿಯೊಂದಿಗೆ ಕರಿಸಿದ್ದೇಶ್ವರ ಜಾತ್ರೆಗೆ ತೆರಳಿದ್ದಾಗ ಅಮೀರ್ ಲಾಲ್‌ಸಾಬ್ ಜಮಾದಾರ್ (೨೬) ಎಂಬಾತ ಬಾಲಕಿಯನ್ನು ಹಿಂಬಾಲಿಸಿ, ಪ್ರೀತಿಸುವಂತೆ ಒತ್ತಾಯಿಸಿದ್ದಾನೆ.
ಬಾಲಕಿ ನಿರಾಕರಿಸಿ ತಂದೆ ತಾಯಿಗೆ ತಿಳಿಸುವುದಾಗಿ ಹೇಳಿದ್ದಾಳೆ. ಇದರಿಂದ ಆಕ್ರೋಶಗೊಂಡು ಆರೋಪಿ ತನ್ನ ಬಳಿಯಿದ್ದ ಮಟನ್ ಕತ್ತರಿಸುವ ಹರಿತವಾದ ಚಾಕುವಿನಿಂದ ಬಾಲಕಿಯ ಎದೆ, ಬೆನ್ನು ಹಾಗೂ ಕೈಗೆ ಬರ್ಬರವಾಗಿ ಇರಿದು ಸ್ಥಳದಲ್ಲೇ ಕೊಲೆ ಮಾಡಿದ್ದ. ಬಳಿಕ ಸಮೀಪದ ಜಮೀನಿನಲ್ಲಿ ಬೇವಿನ ಮರಕ್ಕೆ ಡ್ರಿಪ್ ಪೈಪ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೂ ಯತ್ನಿಸಿ ವಿಫಲನಾಗಿದ್ದ. ಮರುದಿನವೇ ಪೊಲೀಸರು ಆತನನ್ನು ಬಂಧಿಸಿದ್ದರು.


