ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ (Bengaluru) ಅಪರಾಧ (Crime )ಕೃತ್ಯಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದೀಗ ಕ್ಷುಲ್ಲಕ ಕಾರಣಕ್ಕೆ ಪಿಜಿ ಮಾಲೀಕರೊಬ್ಬರನ್ನು ಬ್ಯಾಟ್‌ನಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದಾರೆ .ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕಸ್ತೂರಿನಗರದಲ್ಲಿ ನಡೆದಿದೆ.
ಮೃತರನ್ನು ಲಕ್ಷ್ಮಿ ನರಸಿಂಹ ಪಿಜಿ ಮಾಲೀಕರಾದ ಮಾಧವ್ ಮಟ್ಲೆ (37) ಎಂದು ಗುರುತಿಸಲಾಗಿದೆ. ಕೃತ್ಯ ಎಸಗಿದ ಬಿ.ಕಾಂ ಅಂತಿಮ ವರ್ಷದ ವಿದ್ಯಾರ್ಥಿ ರಾಕೇಶ್ (21) ಹಾಗೂ ಬಿಬಿಎ ಪ್ರಥಮ ವರ್ಷದ ವಿದ್ಯಾರ್ಥಿ ಡಾನ್ ಬ್ರೈಟ್ ಸನ್ (20) ಎಂಬಿಬ್ಬರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.
ಘಟನೆಯ ಹಿನ್ನೆಲೆ ಏನು?
ಸೋಮವಾರ ಸಂಜೆ 6 ರಿಂದ 6.30 ರ ಸುಮಾರಿಗೆ ಕಸ್ತೂರಿನಗರದ ಮುಖ್ಯ ರಸ್ತೆ ಬಳಿ ಇರುವ ಪಿಜಿ ಮುಂಭಾಗದಲ್ಲಿ ಈ ಘಟನೆ ನಡೆದಿದೆ.
ಬಂಧಿತ ವಿದ್ಯಾರ್ಥಿ ಇಬ್ಬರೂ ಮದ್ಯಪಾನ ಮಾಡಿದ್ದು, ಪಿಜಿ ಆವರಣದೊಳಗೆ ಬಂದು ಅಲ್ಲಿನ ನಲ್ಲಿ (ಟ್ಯಾಪ್) ನೀರಿನಲ್ಲಿ ಕಾಲು ತೊಳೆಯುತ್ತಿದ್ದರು.
ಇದನ್ನು ಗಮನಿಸಿದ ಪಿಜಿ ಮಾಲೀಕ ಮಾಧವ್ ಮಟ್ಲೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವೇಳೆ ಇವರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ.
ಬ್ಯಾಟ್‌ನಿಂದಲೇ ಹಲ್ಲೆ ನಡೆಸಿ ಕೊಲೆ!
ಗಲಾಟೆ ತಾರಕಕ್ಕೇರಿದಾಗ ಮಾಧವ್ ಮಟ್ಲೆ ಅವರು ವಿದ್ಯಾರ್ಥಿಗಳಿಗೆ ಹೊಡೆಯಲು ಕ್ರಿಕೆಟ್ ಬ್ಯಾಟ್ ತಂದಿದ್ದಾರೆ ಎನ್ನಲಾಗಿದೆ.
ಆದರೆ ಆರೋಪಿಗಳು ಮಾಧವ್ ಕೈಯಿಂದಲೇ ಬ್ಯಾಟನ್ನು ಕಸಿದುಕೊಂಡು, ಅವರ ಮೇಲೆಯೇ ಭೀಕರವಾಗಿ ಹಲ್ಲೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಮಾಧವ್ ಮಟ್ಲೆ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ರಾಮಮೂರ್ತಿನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರೂ ಕಾಲೇಜು ವಿದ್ಯಾರ್ಥಿಗಳನ್ನು ಬಂಧಿಸಿದ್ದು, ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.


