Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬೆಳಗಾವಿ ‘ಬಿಸಿ ತುಪ್ಪ’: ಡಿಕೆಶಿ ಸಂಪುಟ ಸರ್ಕಸ್‌ಗೆ ಗಡಿ ಜಿಲ್ಲೆಯದ್ದೇ ಟೆನ್ಷನ್!

Advertisement

ವರದಿ:ಉಮೇಶ ಗೌರಿ (ಯರಡಾಲ)
        ರಾಜ್ಯ ರಾಜಕಾರಣದ ಪಲ್ಲಟದ ಬೆನ್ನಲ್ಲೇ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರ ಪಟ್ಟಾಭಿಷೇಕಕ್ಕೆ ಕ್ಷಣಗಣನೆ ಆರಂಭವಾಗಿದೆ. ಹೊಸ ನಾಯಕನ ಸಾರಥ್ಯದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳ ಕಸರತ್ತು, ದೆಹಲಿ ಮಟ್ಟದ ಓಡಾಟಗಳು ತಾರಕಕ್ಕೇರಿವೆ. ಆದರೆ, ಅಧಿಕಾರದ ಚುಕ್ಕಾಣಿ ಹಿಡಿಯುತ್ತಿರುವ ‘ಟ್ರಬಲ್ ಶೂಟರ್’ ಪಾಲಿಗೆ ಸ್ವತಃ ಬೆಳಗಾವಿ ಜಿಲ್ಲೆಯ ರಾಜಕಾರಣವೇ ಸದ್ಯಕ್ಕೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಸಿದ್ದರಾಮಯ್ಯ ಯುಗದ ನಂತರದ ಕಾಂಗ್ರೆಸ್ ನಡೆ ಹೇಗಿರಲಿದೆ ಎಂಬ ಕುತೂಹಲ ಒಂದೆಡೆಯಾದರೆ, "ಬೆಳಗಾವಿ ರಾಜಕಾರಣದ ಮರ್ಜಿ ಕಾಯ್ದುಕೊಳ್ಳದಿದ್ದರೆ ಸರ್ಕಾರಕ್ಕೇ ಗಂಡಾಂತರ" ಎಂಬ ಇತಿಹಾಸದ ಪಾಠ ನೂತನ ಸಿಎಂ ನಿದ್ದೆಗೆಡಿಸಿದೆ.
ಜಾರಕಿಹೊಳಿ ‘ಪಟ್ಟು’: ದೆಹಲಿ ಅಖಾಡದಲ್ಲಿ ಅಹಿಂದ ನಾಯಕ!
ಯಾವಾಗಲೂ ಹಠಕ್ಕೆ ಬಿದ್ದರೆ ಬಿಡದ ಇತಿಹಾಸ ಹೊಂದಿರುವ ಜಾರಕಿಹೊಳಿ ಸಾಹುಕಾರರ ನಡೆ ಈ ಬಾರಿಯೂ ಕುತೂಹಲ ಮೂಡಿಸಿದೆ. ಸಿದ್ದರಾಮಯ್ಯ ಬಣದ ಪ್ರಭಾವಿ ಅಹಿಂದ ನಾಯಕ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಕೇವಲ ಸಚಿವ ಸ್ಥಾನಕ್ಕಷ್ಟೇ ತೃಪ್ತರಾಗುವಂತೆ ಕಾಣುತ್ತಿಲ್ಲ. ಸಚಿವ ಸ್ಥಾನದ ಜೊತೆಗೆ ಕೆಪಿಸಿಸಿ ಸಾರಥ್ಯವೂ ತಮಗೆ ಸಿಗಬೇಕೆಂಬ ಪಟ್ಟು ಹಿಡಿದು ಹೈಕಮಾಂಡ್ ಅಂಗಳಕ್ಕೆ ಜಿಗಿದಿದ್ದಾರೆ. ಮೊದಲ ಹಂತದ ಸಂಪುಟ ಪಟ್ಟಿಯಲ್ಲಿ ಸತೀಶ್ ಜಾರಕಿಹೊಳಿ ಮತ್ತು ಡಿಕೆಶಿ ಆಪ್ತ ವಲಯದ ಲಕ್ಷ್ಮೀ ಹೆಬ್ಬಾಳ್ಕರ್ ಹೆಸರು ಬಹುತೇಕ ಖಚಿತವಾಗಿದ್ದರೂ, ಜಿಲ್ಲೆಯೊಳಗಿನ ಆಂತರಿಕ ಬೇಗುದಿ ಮಾತ್ರ ತಣ್ಣಗಾಗಿಲ್ಲ.
ಈ ಬಾರಿ ಡಿಕೆಶಿ ಸಂಪುಟದಲ್ಲಿ ಹೊಸ ಮುಖಗಳೇ ನಿರೀಕ್ಷೆ ಇಟ್ಟುಕೊಂಡಿದ್ದ ಬೆಳಗಾವಿಯ ಹನ್ನೊಂದು ಶಾಸಕರು ಪೈಕಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಹಿರಿಯ ಶಾಸಕ ಅಶೋಕ ಪಟ್ಟಣ, ಗಣೇಶ್ ಹುಕ್ಕೇರಿ ಹಾಗೂ ಮಹಾಂತೇಶ ಕೌಜಲಗಿ ಹೆಸರು ಮುಂಚೂಣಿಯಲ್ಲಿತ್ತು. ಸಿದ್ದರಾಮಯ್ಯ ಸಂಪುಟದಲ್ಲಿ ಬೆಳಗಾವಿಗೆ ಎರಡು ಸಚಿವ ಸ್ಥಾನ ನೀಡಲಾಗಿತ್ತು. ಬಿಜೆಪಿ ಸರ್ಕಾರದಲ್ಲಿ ಡಿಸಿಎಂ ಹುದ್ದೆ ಅಲಂಕರಿಸಿದ ಸವದಿ ಕಮಲ ತೊರೆದು ಕೈ ಪಾಳಯಕ್ಕೆ ಬಂದಿದ್ದು ಪಕ್ಷಕ್ಕೆ ಪ್ಲಸ್ ಪಾಯಿಂಟ್ ಆಗಿದ್ದರೂ ಬೆಳಗಾವಿ ರಾಜಕಾರಣ ಜಾರಕಿಹೊಳಿ ಹಿಡಿತದಿಂದ ಕೈ ತಪ್ಪುವ ಭೀತಿಗೆ ಸವದಿ ಅವರನ್ನು ಸಚಿವ ಸ್ಥಾನಕ್ಕೆ ಪರಿಗಣಿಸಿರಲಿಲ್ಲ ಎನ್ನಲಾಗಿದೆ.
ಮೂರು ತಲೆಮಾರಿನಿಂದ ರಾಜಕಾರಣದಲ್ಲಿರುವ ಕೌಜಲಗಿ ಕುಟುಂಬದ ಮಹಾಂತೇಶ ಕೌಜಲಗಿ ನಾಲ್ಕು ಬಾರಿ ಶಾಸಕರಾಗಿದ್ದರೂ ಸಚಿವ ಸ್ಥಾನದಿಂದ ವಂಚಿತರಾಗಿದ್ದು ಡಿಕೆಶಿ ಸಂಪುಟ ಸೇರುವ ನಿರೀಕ್ಷೆ ಇಟ್ಟುಕೊಂಡಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಮತ್ತೊಬ್ಬ ಹಿರಿಯ ಶಾಸಕ ಅಶೋಕ ಪಟ್ಟಣ ಕೂಡ ಈ ಬಾರಿ ಸಚಿವ ಸ್ಥಾನ ಪಡೆಯಲಿದ್ದಾರೆ ಎಂಬ ನಿರೀಕ್ಷೆ ಇತ್ತು ಅದರಂತೆ ಮಾಜಿ ಸಚಿವ “ಪ್ರಕಾಶ್ ಹುಕ್ಕೇರಿ ಅವರು ಪುತ್ರ ಗಣೇಶ್ ಹುಕ್ಕೇರಿಗೆ ಈ ಬಾರಿ ಸಚಿವ ಸ್ಥಾನ ಕೊಡದೇ ಇದ್ದಲ್ಲಿ ಹೈ ಕಮಾಂಡ್ ಮತ್ತು ನನಗೆ ಇದೆ” ಅನ್ನೋ ಮಾತುಗಳು ಕೂಡ ಕೇಳಿ ಬಂದಿದೆ. ಒಟ್ಟಾರೆ ನೂತನ ಸಂಪುಟ ರಚನೆಯಲ್ಲಿ ಬೆಳಗಾವಿ ಮಾತ್ರ ಡಿಕೆಶಿ ಅವರಿಗೆ ಟೆನ್ಶನ್ ತಂದಿಟ್ಟಿದೆ.


ನೆರಳಿನಲ್ಲೇ ನಡೆದ ದಾಳ ಉರುಳಾಟ:
ಸಿದ್ದರಾಮಯ್ಯ ನಂತರದ ಕಾಂಗ್ರೆಸ್ ಹೇಗಿರಲಿದೆ ಅನ್ನೋದು ಸ್ವತಃ ಕಾಂಗ್ರೆಸ್ ಕಾರ್ಯಕರ್ತರಿಗೆ ಕುತೂಹಲ ಮೂಡಿಸಿದೆ. ಡಿಕೆಶಿ ಆಪ್ತ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಇತ್ತೀಚಿನ ಡಿಸಿಸಿ ಬ್ಯಾಂಕ್ ಚುನಾವಣೆ ಗದ್ದಲದಿಂದ ಸದ್ದಿಲ್ಲದೆ ದೂರ ಉಳಿಯುವ ಮೂಲಕ ತಮ್ಮ ಸಹೋದರ ಚನ್ನರಾಜ ಹಟ್ಟಿಹೊಳಿ ಅವರನ್ನು ಡಿಸಿಸಿ ನಿರ್ದೇಶಕ ಸ್ಥಾನಕ್ಕೆ ನಾಮನಿರ್ದೇಶನ ಮಾಡುವಲ್ಲಿ ಯಶಸ್ವಿಯಾಗಿದ್ದರು.ಈ ಮೂಲಕ ರಾಜಕೀಯ ಚದುರಂಗದಾಟದಲ್ಲಿ ತಾವು ಪರೋಕ್ಷ ಫಲಾನುಭವಿ ಆಗಿದ್ದನ್ನು ಜಿಲ್ಲಾ ರಾಜಕಾರಣ ಸೂಕ್ಷ್ಮವಾಗಿ ಗಮನಿಸಿದೆ.

ಹಗಲು ಕಂಡ ಬಾವಿಗೆ ರಾತ್ರಿ ಬೀಳಲಾರರು ‘ಕನಕಪುರ ಬಂಡೆ’!
ಬೆಳಗಾವಿ ರಾಜಕಾರಣದ ಕಿಚ್ಚಿಗೆ ಈ ಹಿಂದೆ ರಾಜ್ಯ ಸರ್ಕಾರಗಳೇ ಉರುಳಿಬಿದ್ದ ಇತಿಹಾಸವಿದೆ. ಹಗಲು ಕಂಡ ಬಾವಿಗೆ ರಾತ್ರಿ ಬೀಳುವ ಸಾಹಸಕ್ಕೆ ಡಿ.ಕೆ.ಶಿವಕುಮಾರ್ ಖಂಡಿತ ಕೈಹಾಕಲಾರರು. ಲಕ್ಷ್ಮಣ ಸವದಿ ಅವರ ಆಗಮನ ಪಕ್ಷಕ್ಕೆ ಪ್ಲಸ್ ಪಾಯಿಂಟ್ ತಂದುಕೊಟ್ಟಿರುವುದು ನಿಜವಾದರೂ, ಅವರನ್ನು ಸತತವಾಗಿ ಕಡೆಗಣಿಸಿದರೆ ಲಿಂಗಾಯತ ಸಮುದಾಯಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂಬ ಆತಂಕ ಹೈಕಮಾಂಡ್‌ಗಿದೆ. ಹೀಗಾಗಿ, ಅಶೋಕ ಪಟ್ಟಣ ಅವರನ್ನು ಸಮಾಧಾನಪಡಿಸಿ, ಸವದಿ ಅವರಿಗೆ ಅದೃಷ್ಟದ ಬಾಗಿಲು ತೆರೆಯುವ ಸಾಧ್ಯತೆಯೇ ದಟ್ಟವಾಗಿದೆ.


ಸಂದಿಗ್ಧ ಸ್ಥಿತಿಯಲ್ಲಿ ಸಾಹುಕಾರ!
ಒಂದು ವ್ಯಕ್ತಿ ಒಂದು ಹುದ್ದೆ ಅಂತ ಈಗಾಗಲೇ ಹೈ ಕಮಾಂಡ್ ನಿರ್ಧರಿಸಿಯಾಗಿದೆ ಆದರೆ ಸಿಎಂ ಹುದ್ದೆಗೇರುವ ಡಿಕೆ ಶಿವಕುಮಾರ್ ಈ ಹಿಂದೆ ಸಿದ್ದರಾಮಯ್ಯ ಸಂಪುಟದಲ್ಲಿ ಡಿಸಿಎಂ ಹುದ್ದೆ ಜೊತೆಗೆ ಪ್ರಮುಖ ನೀರಾವರಿ ಖಾತೆ ಕೂಡ ಹೊಂದಿದ್ದರು ಅನ್ನೋದು ಅಪೇಕ್ಷಣೀಯ ಸಂಗತಿ. ಸದ್ಯಕ್ಕೆ ಸತೀಶ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಆಸೆ ಇದೆ ಆದರೆ ಸಂಪನ್ಮೂಲ ಕ್ರೂಢೀಕರಣದ ಹಿನ್ನೆಲೆಯಲ್ಲಿ ಸಚಿವ ಸ್ಥಾನ ಅತ್ಯವಶ್ಯಕ ಅನ್ನೋದು ಸತೀಶ್ ಅವರ ಅಭಿಪ್ರಾಯ ಹೀಗಾಗಿ ಸಚಿವ ಸ್ಥಾನದ ಜೊತೆಗೆ ಕೆಪಿಸಿಸಿ ಹುದ್ದೆ ಕೊಡಿ ಅನ್ನೋದು ಸತೀಶ್ ಅವರ ಬೇಡಿಕೆ. ಆದರೆ ಹೈ ಕಮಾಂಡ್ ಇದಕ್ಕೆ ಒಪ್ಪುವ ಸಾಧ್ಯತೆ ತೀರಾ ಕಡಿಮೆ ಇದ್ದು ಸತೀಶ್ ಅವರ ಮುಂದಿನ ನಡೆ ಏನಿರಲಿದೆ ಅನ್ನೋದು ಕುತೂಹಲ ಮೂಡಿಸಿದೆ. ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಅಂತ ಅವರೇ ಘೋಷಿಸಿಕೊಂಡಿರುವ ಕಾರಣಕ್ಕೆ ಕೆಪಿಸಿಸಿ ಅಧ್ಯಕ್ಷ ಹುದ್ದೆ ಅನಿವಾರ್ಯ ಹೀಗಾಗಿ ಅದಕ್ಕಷ್ಟೇ ಒಪ್ಪುತ್ತಾರಾ ಅಥವಾ ಎರಡೂ ಹುದ್ದೆ ಕೊಡಿ ಅಂತ ಒತ್ತಡ ತರಬಹುದಾ ಅನ್ನೋದು ಕಾದು ನೋಡಬೇಕಿದೆ.

ಬೆಳಗಾವಿ ಹಿಡಿತ ಸಾಹುಕಾರ ಕೈ ತಪ್ಪುವ ಸಾಧ್ಯತೆ!
ಕೆಪಿಸಿಸಿ ಅಧ್ಯಕ್ಷ ಹುದ್ದೆ ಅಲಂಕರಿಸಿದರೆ ಬೆಳಗಾವಿ ಜಿಲ್ಲೆಯ ರಾಜಕಾರಣದ ಹಿಡಿತ ಕೈ ತಪ್ಪುವ ಸಾಧ್ಯತೆ ಇರುವ ಬೆನ್ನಲ್ಲೇ ಸಚಿವ ಸ್ಥಾನವನ್ನು ಕೊಡಿ ಅಂತ ಪಟ್ಟು ಹಿಡಿದ ಸಾಹುಕಾರ್ ಸಚಿವ ಸ್ಥಾನದಿಂದ ವಂಚಿತರಾದರೆ ಆ ಸ್ಥಾನ ಲಕ್ಷ್ಮಿ ಹೆಬ್ಬಾಳ್ಕರ್ ಪಾಲಾಗುವ ಸಾಧ್ಯತೆ ದಟ್ಟವಾಗಿದೆ. ಪ್ರಬಲ ಲಿಂಗಾಯತ ನಾಯಕಿ ಹೆಬ್ಬಾಳ್ಕರ್ ಅವರು ಸಹಜವಾಗಿ ಬೆಳಗಾವಿಯನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವಂತೆ ಕಾಣುತ್ತದೆ.
ಹೈ ಕಮಾಂಡ್ ಪಾಲಿಗೆ ಜೇನು ಗೂಡಾದ ಬೆಳಗಾವಿ ಪಾಲಿಟಿಕ್ಸ್
ಸಚಿವ ಸಂಪುಟ ರಚನೆಯಲ್ಲಿ ನೂತನ ಸಿಎಂ ಪಾಲಿಗೆ ಬೆಳಗಾವಿ ಜೇನು ಗೂಡಾಗಿ ಪರಿಣಮಿಸಲಿದೆ. ಇದರಿಂದಾಗಿ ಅತೃಪ್ತರ ಬಣ ಹುಟ್ಟಿ ಬೆಳಗಾವಿ ರಾಜಕಾರಣ ಕಾಂಗ್ರೆಸ್ ಕೈ ತಪ್ಪುವ ಸಾಧ್ಯತೆ ದಟ್ಟವಾಗಿದೆ. ಅಳೆದು ತೂಗಿ ಸಂಪುಟಕ್ಕೆ ಸೇರಿಸಿಕೊಳ್ಳುವ ನಿರ್ಧಾರಕ್ಕೆ ಬಂದಿರುವ ಬಾವಿ ಸಿಎಂ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸಲಹೆಯನ್ನು ಪಡೆದು ಈ ಬಾರಿ ಮೂರು ಸ್ಥಾನಗಳನ್ನು ಬೆಳಗಾವಿಗೆ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ
ಹಿರಿತನದ ಆಧಾರದ ಮೇಲೆ ಅಶೋಕ ಪಟ್ಟಣ, ಮಹಾಂತೇಶ ಕೌಜಲಗಿ ಮತ್ತು ಲಕ್ಷ್ಮಣ ಸವದಿ ಮೂವರೂ ಸಚಿವ ಸ್ಥಾನಕ್ಕೆ ಯೋಗ್ಯರಾಗಿದ್ದಾರೆ. ಆದರೆ, ಪ್ರಾದೇಶಿಕ ಸಮತೋಲನ ಮತ್ತು ಆಂತರಿಕ ಬಂಡಾಯದ ಬಿಸಿ ತಗಿಸುವ ಸವಾಲು ಕೂಡ ನೂತನ ಸಿಎಂ ಎದುರಿಗೆ ಇದೆ. ಸಿದ್ದರಾಮಯ್ಯ ನಂತರದ ಕಾಂಗ್ರೆಸ್ ಪಕ್ಷವನ್ನು ಸುಭದ್ರವಾಗಿ ಮುನ್ನಡೆಸಲು ‘ಡಿಕೆಶಿ’ ಗಡಿ ಜಿಲ್ಲೆಯ ಈ ರಾಜಕೀಯವನ್ನು ಹೇಗೆ ಸಂಭಾಳಿಸಲಿದ್ದಾರೆ ಮತ್ತು ಯಾರಿಗೆ ಮಣೆ ಹಾಕಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.

ಅತೃಪ್ತರು ಬೂದಿ ಮುಚ್ಚಿದ ಕೆಂಡ!
ರಾಜ್ಯ ರಾಜಕಾರಣದಲ್ಲಿ ಬೆಳಗಾವಿ ಸದಾ ಬೂದಿ ಮುಚ್ಚಿದ ಕೆಂಡದಂತೆ ಇದ್ದು ಯಾವ ಕ್ಷಣದಲ್ಲಾದರೂ ಅಸಮಾಧಾನ ಭುಗಿಲೇಳುವ ಸಾಧ್ಯತೆ ಇದೆ. ಹಿರಿಯ ಶಾಸಕ ಅಶೋಕ ಪಟ್ಟಣ ಅವರಿಗೆ ಈ ಬಾರಿ ಸಚಿವ ಸ್ಥಾನ ನೀಡದೇ ಇದ್ದರೂ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಅವರನ್ನು ಪರಿಗಣಿಸುವುದಾಗಿ ಹೈ ಕಮಾಂಡ್ ಅವರ ಮೂಗಿಗೆ ತುಪ್ಪ ಸವರುವ ಸಾಧ್ಯತೆ ಇದೆ. ಆದರೆ ಇನ್ನುಳಿದ ಶಾಸಕರು ತಮ್ಮ ಹಿರಿತನ ಪರಿಗಣಿಸಿಲ್ಲ ಅಂತ ಅಸಮಾಧಾನ ತೋರುವ ಪ್ರಯತ್ನ ಮಾಡಲಾರರು ಎಂದು ಹೇಳಲಾಗದು. ಒಟ್ಟಾರೆ ಬೆಳಗಾವಿ ಜಿಲ್ಲಾ ರಾಜಕಾರಣ ಯಾವುದೇ ಸರಕಾರಗಳಿದ್ದರು ತೆಲೆ ನೋವು ಶತಸಿದ್ದ.

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಶ್ವಕಪ್ ಫುಟ್‌ಬಾಲ್: ಕೊಲಂಬಿಯಾಗೆ ೩-೧ ರ ಜಯದೆಹಲಿಯಲ್ಲೂ ದೋಸೆಯ ಘಮ, ಘಮ15 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಎಫ್ ಡಿಎ ಗ್ಲೇನ್ ಫಿಲಿಪ್ಸ್ ಶತಕ: ಕಿವೀಸ್ ಉತ್ತಮ ಮೊತ್ತಮುಖ್ಯಮಂತ್ರಿಯಾದ ಬಳಿಕ ಮೊದಲ ಟಾಸ್ಕ್ ನಲ್ಲೇ ಗೆದ್ದು ಬೀಗಿದ ಡಿ.ಕೆ.ಶಿವಕುಮಾರ್ ಮತದಾನ ಹಕ್ಕು ಇದ್ದವರಿಗೆ ಮಾತ್ರ ಗ್ಯಾರಂಟಿ ಯೋಜನೆಗಳು : ಡಿ.ಕೆ.ಶಿವಕುಮಾರ್60ನೇ ವಯಸ್ಸಿನಲ್ಲಿ ಪೇಸ್ ಬುಕ್ ಲವ್ : 80 ವರ್ಷದ ವರನ ವರಿಸಿದ ಹಿರಿಯ ನಟಿ ಸ್ಯಾಂಡ್ ಮಾಫಿಯಾ : ಬಿಜೆಪಿ ಮುಖಂಡ ಸೇರಿ ಮೂವರನ್ನು ಕಾರಿನಲ್ಲೇ ಸುಟ್ಟ ಕಿರಾತಕರುವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ ಐದೂ ಅಭ್ಯರ್ಥಿಗಳು ಗೆಲುವು ಪಕ್ಕಾ : ಲಕ್ಷ್ಮೀ ಹೆಬ್ಬಾಳ್ಕರ್ಸದ್ಯಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಕಡಿಮೆಯಾಗುವುದಿಲ್ಲ : ಕೇಂದ್ರ ಸರ್ಕಾರ ಸ್ಪಷ್ಟನೆ