ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು (KPSC) 2026-27ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ 'ಎ' ಮತ್ತು ಗ್ರೂಪ್ 'ಬಿ' ವೃಂದದ ಒಟ್ಟು 319 ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳಿಗೆ ಭಾರಿ ಸಿಹಿ ಸುದ್ದಿ ನೀಡಿದೆ.
ಸರ್ಕಾರವು ನಿಗದಿಪಡಿಸಿದ್ದ ವಯೋಮಿತಿಗೆ ಹೆಚ್ಚುವರಿಯಾಗಿ 5 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ಅಳವಡಿಸಿಕೊಂಡು ನೂತನ ವಯೋಮಿತಿ ಪಟ್ಟಿಯನ್ನು ಪ್ರಕಟಿಸಿದೆ.
ಈ ಕುರಿತು ಕೆಪಿಎಸ್‌ಸಿ ಕಾರ್ಯದರ್ಶಿ ಜ್ಯೋತಿ ಕೆ. ಅವರು ಆಗಸ್ಟ್ 13, 2026 ರಂದು ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ.
ಉಳಿಕೆ ಮೂಲ ವೃಂದದ 297 ಹಾಗೂ ಹೈದರಾಬಾದ್-ಕರ್ನಾಟಕ (ಕಲ್ಯಾಣ ಕರ್ನಾಟಕ) ವೃಂದದ 22 ಹುದ್ದೆಗಳು ಸೇರಿದಂತೆ ಒಟ್ಟು 319 ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿ ಜುಲೈ 31, 2026 ರಂದು ಕೆಪಿಎಸ್‌ಸಿ ಅಧಿಸೂಚನೆ ಹೊರಡಿಸಿತ್ತು.
ವಯೋಮಿತಿಯಲ್ಲಿ 5 ವರ್ಷ ಹೆಚ್ಚುವರಿ ಸಡಿಲಿಕೆ:
ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 262 ಸೇನೆನಿ 2025, ದಿನಾಂಕ: 29-01-2026 ರ ಅನ್ವಯ 5 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದ್ದು, ಅದರಂತೆ ಪರಿಷ್ಕೃತ ಗರಿಷ್ಠ ವಯೋಮಿತಿ ವಿವರ ಹೀಗಿದೆ:
ಕನಿಷ್ಠ ವಯೋಮಿತಿ: 21 ವರ್ಷಗಳು
ಸಾಮಾನ್ಯ ಅರ್ಹತೆ (General Category) ಅಭ್ಯರ್ಥಿಗಳಿಗೆ: ಗರಿಷ್ಠ 40 ವರ್ಷಗಳು (ಹಿಂದೆ 35 ವರ್ಷವಿತ್ತು)
ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ: ಗರಿಷ್ಠ 43 ವರ್ಷಗಳು (ಹಿಂದೆ 38 ವರ್ಷವಿತ್ತು)
ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ-1 ಅಭ್ಯರ್ಥಿಗಳಿಗೆ: ಗರಿಷ್ಠ 45 ವರ್ಷಗಳು (ಹಿಂದೆ 40 ವರ್ಷವಿತ್ತು)
ಸರ್ಕಾರದ ಈ ನಿರ್ಧಾರದಿಂದಾಗಿ ವಯೋಮಿತಿ ಮೀರುತ್ತಿದ್ದ ಸಾವಿರಾರು ಉದ್ಯೋಗಾಕಾಂಕ್ಷಿಗಳಿಗೆ ಕೆಪಿಎಸ್‌ಸಿ ಪರೀಕ್ಷೆ ಬರೆಯಲು ಮತ್ತೊಂದು ಸುವರ್ಣ ಅವಕಾಶ ಲಭಿಸಿದಂತಾಗಿದೆ.


