ಬೆಳಗಾವಿ: ವಿಮೆ ಹಣದ ಆಸೆಗೆ ಬಿದ್ದು ಸ್ವಂತ ಪತಿಯನ್ನೇ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯ ಯಮಕನಮರಡಿಯಲ್ಲಿ ಮತ್ತೊಂದು ಆಘಾತಕಾರಿ ಘಟನೆ ಸಂಭವಿಸಿದೆ.
ಪ್ರಕರಣದ ಮುಖ್ಯ ಆರೋಪಿ ಸುಮಾ ಮಂಜರಗಿ ಪೊಲೀಸರ ಕೈಗೆ ಸಿಕ್ಕಿಬೀಳುತ್ತಿದ್ದಂತೆ, ಅತ್ತ ಮಗಳ ಈ ದ್ರೋಹದ ಕೃತ್ಯದಿಂದ ಆಕೆಯ ಹೆತ್ತ ತಾಯಿ ನೇಣಿಗೆ ಶರಣಾಗಿದ್ದಾರೆ.
ಮಾಜಿ ಸೈನಿಕ ಸಂದೀಪ್ ಮಂಜರಗಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾದ ಸುಮಾ ಮಂಜರಗಿ ತಾಯಿ ಮಹಾದೇವಿ ಬದಾಮಿ (57) ಅವರೇ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಸ್ವಂತ ಮಗಳು ಮತ್ತು ಆಕೆಯ ಪ್ರಿಯಕರ ಸೇರಿ ಅಳಿಯನನ್ನು ಅತ್ಯಂತ ಕ್ರೂರವಾಗಿ ಕೊಂದ ವಿಷಯ ತಿಳಿಯುತ್ತಿದ್ದಂತೆ ತಾಯಿ ತೀವ್ರ ಆಘಾತಕ್ಕೆ ಒಳಗಾಗಿದ್ದರು.
ಜೂನ್ 14ರಂದು ಮಗಳನ್ನು ಯಮಕನಮರಡಿ ಪೊಲೀಸರು ಬಂಧಿಸುತ್ತಿದ್ದಂತೆ ತಾಯಿ ಮಾನಸಿಕವಾಗಿ ಸಂಪೂರ್ಣ ಕುಸಿದುಹೋಗಿದ್ದರು ಎನ್ನಲಾಗಿದೆ.
ಮಗಳು ಮಾಡಿದ ಈ ಮಹಾಪಾಪದ ಕೃತ್ಯದಿಂದ ಇಡೀ ಊರಿನಲ್ಲಿ ತಲೆ ಎತ್ತಿ ಓಡಾಡದಂತ ಪರಿಸ್ಥಿತಿ ಅವರಿಗೆ ನಿರ್ಮಾಣವಾಗಿತ್ತು.
ಇದರಿಂದ ತೀವ್ರ ಮನನೊಂದ ಮಹಾದೇವಿ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಯಮಕನಮರಡಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.


