ಯಾದಗಿರಿ : ದಿನಕ್ಕೆ 3ರಿಂದ 4 ಬಾಟಲಿ ಸ್ಟಿಂಗ್ ಜ್ಯೂಸ್ ಕುಡಿಯುತ್ತಿದ್ದ ಯುವಕನೊಬ್ಬ ಕಿಡ್ನಿ ವೈಫಲ್ಯವಾಗಿ ಸಾವನ್ನಪ್ಪಿರುವ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದಲ್ಲಿ ನಡೆದಿದೆ.
ಬಾಲು ದೇಸಾಯಿ(Baalu desai) (19) ಮೃತ ಯುವಕ. ಈ ಯುವಕ ಕಳೆದ ಹಲವು ದಿನಗಳಿಂದ ಸ್ಟಿಂಗ್ ಜ್ಯೂಸ್ ಅನ್ನು ಅತಿಯಾಗಿ ಸೇವನೆ ಮಾಡುತ್ತಿದ್ದ ಎಂದು ಹೇಳಲಾಗುತ್ತಿದೆ. ಬಾಲು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ವ್ಯಾಸಾಂಗ ಮಾಡುತ್ತಿದ್ದ. ಪ್ರತಿದಿನ 3 ರಿಂದ 4 ಬಾಟಲಿ ಸ್ಟಿಂಗ್ ಜ್ಯೂಸ್ ಕುಡಿಯುತ್ತಿದ್ದ. ಕುಟುಂಬಸ್ಥರು ಮತ್ತು ಸ್ನೇಹಿತರು ಅಷ್ಟೊಂದು ಸ್ಟಿಂಗ್ ಜ್ಯೂಸ್ ಕುಡಿಯುವುದು ಒಳ್ಳೆಯದಲ್ಲ ಎಂದು ತಿಳಿ ಹೇಳಿದ್ದರೂ ಆತ ಕೇಳಿರಲಿಲ್ಲ.
ಇತ್ತೀಚೆಗೆ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅತಿಯಾದ ಕೆಫೇನ್ ಹಾಗೂ ರಾಸಾಯನಿಕಗಳ ಸೇವನೆಯಿಂದ ಕಿಡ್ನಿ ವೈಫಲ್ಯ ಉಂಟಾಗಿ ಸಾವನ್ನಪ್ಪಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ.


