ಬೆಳಗಾವಿ: ಕಳೆದ 13 ವರ್ಷಗಳಿಂದ ರಾಜ್ಯ ವಿಪತ್ತು ನಿರ್ವಹಣಾ ಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸಿಪಿಐ ಶ್ರೀಶೈಲ್ ಚೌಗುಲಾ ನಿಗೂಢವಾಗಿ ಮೃತಪಟ್ಟಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಮನೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದ್ದು, ಸಾವಿನ ಸುತ್ತ ಹಲವು ಅನುಮಾನಗಳು ಮೂಡಿವೆ.
ಮಾಹಿತಿ ಪ್ರಕಾರ, ಶ್ರೀಶೈಲ್ ಚೌಗುಲಾ ನಿನ್ನೆ ಕೆಲಸ ಮುಗಿಸಿ ಸಂಜೆ ಮನೆಗೆ ವಾಪಸ್ ಆಗಿದ್ದರು. ಪತ್ನಿಯೊಂದಿಗೆ ಕೆಲಕಾಲ ಮಾತನಾಡಿದ ಬಳಿಕ ಊಟಕ್ಕೆ ಕರೆಯುವಂತೆ ತಿಳಿಸಿ ತಮ್ಮ ಕೊಠಡಿಗೆ ತೆರಳಿದ್ದರು.
ಬಳಿಕ ಹೊರಬಂದು ರಾತ್ರಿ ಊಟ ಮಾಡಿ ಮತ್ತೆ ರೂಮಿಗೆ ಹೋಗಿದ್ದರು. ಸ್ವಲ್ಪ ಸಮಯದ ಬಳಿಕ ಪತ್ನಿ ಕೊಠಡಿಯ ಬಳಿ ತೆರಳಿದಾಗ ಶ್ರೀಶೈಲ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎನ್ನಲಾಗಿದೆ.
ತಕ್ಷಣ ಕಚೇರಿ ಸಿಬ್ಬಂದಿಗೆ ಮಾಹಿತಿ ನೀಡಲಾಗಿದ್ದು, ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಷ್ಟರಲ್ಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಶ್ರೀಶೈಲ್ ಚೌಗುಲಾ ಮೂಲತಃ ಅಥಣಿ ತಾಲೂಕಿನ ಕವಟಕೊಪ್ಪ ಗ್ರಾಮದ ಕೃಷಿಕ ಕುಟುಂಬದವರಾಗಿದ್ದು, ರಾಜ್ಯ ವಿಪತ್ತು ನಿರ್ವಹಣಾ ಪಡೆಯಲ್ಲಿ ಉತ್ತಮ ಹೆಸರು ಗಳಿಸಿದ್ದರು. ಇನ್ನೂ ಎರಡು-ಮೂರು ತಿಂಗಳಲ್ಲಿ ಡಿವೈಎಸ್ಪಿ ಹುದ್ದೆಗೆ ಭಡ್ತಿ ಪಡೆಯುವ ನಿರೀಕ್ಷೆಯಲ್ಲಿದ್ದರು ಎನ್ನಲಾಗಿದೆ.
ಮೃತರಿಗೆ ಪತ್ನಿ ಚೇತನಾ ಹಾಗೂ 8 ವರ್ಷದ ಪುತ್ರ ಅಕ್ಷಯ, 5 ವರ್ಷದ ಪುತ್ರಿ ಅನ್ವಿ ಇದ್ದಾರೆ. ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದ್ದು, ಕವಟಕೊಪ್ಪ ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ.
ಇನ್ನೊಂದೆಡೆ, ಶ್ರೀಶೈಲ್ ಆನ್‌ಲೈನ್ ಗೇಮ್ ಗೀಳಿಗೆ ಒಳಗಾಗಿ ಸಾಲದ ಒತ್ತಡದಿಂದ ಈ ನಿರ್ಧಾರಕ್ಕೆ ಬಂದಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಕೌಟುಂಬಿಕ ಕಲಹವೂ ಕಾರಣವಾಗಿರಬಹುದು ಎಂಬ ಅನುಮಾನಗಳೂ ಕೇಳಿಬರುತ್ತಿವೆ.
ಈ ಸಂಬಂಧ ಉದ್ಯಮಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಪೊಲೀಸ್ ತನಿಖೆ ಬಳಿಕವೇ ಸಾವಿನ ನಿಖರ ಕಾರಣ ಬಹಿರಂಗವಾಗಬೇಕಿದೆ.


