ಬೆಳಗಾವಿ :ಜಿಲ್ಲೆಯ (Belagavi) ಅಥಣಿ ತಾಲೂಕಿನ ಖಿಳೇಗಾಂವ ಬಸವಣ್ಣ ಕ್ಷೇತ್ರದಲ್ಲಿ ದೇವರೆತ್ತು (Bull) ಮೇಲೆ ದುಷ್ಕರ್ಮಿಗಳು (Crime) ಪೆಟ್ರೋಲ್ ಅಥವಾ ಆಸಿಡ್‌ನಂತಹ ದ್ರವ ಸುರಿದು ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ. ಘಟನೆಯಲ್ಲಿ ಎತ್ತಿನ ದೇಹದ ಕೆಲ ಭಾಗಗಳು ತೀವ್ರವಾಗಿ ಸುಟ್ಟು ಗಾಯಗೊಂಡಿದೆ.
ಖಿಳೇಗಾಂವ ಬಸವಣ್ಣ ಕ್ಷೇತ್ರದಲ್ಲಿ ದೇವರೆಂದೇ ಭಕ್ತಿಯಿಂದ ಪೂಜಿಸಲಾಗುವ ಎತ್ತಿನ ದೇಹದ ಕೆಲ ಭಾಗಗಳಲ್ಲಿ ಗಂಭೀರ ಸುಟ್ಟ ಗಾಯಗಳು ಕಂಡುಬಂದಿವೆ.
ಎತ್ತಿನ ಮೇಲೆ ಬೆಂಕಿ ಹಚ್ಚಲಾಗಿದೆಯೇ ಎಂಬ ಅನುಮಾನ ಸ್ಥಳೀಯರಲ್ಲಿ ಮೂಡಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂಬ ಒತ್ತಾಯ ಕೇಳಿಬಂದಿದೆ.
ಘಟನೆ ಗಮನಕ್ಕೆ ಬರುತ್ತಿದ್ದಂತೆ ಸ್ಥಳೀಯರು ಗಾಯಗೊಂಡ ಎತ್ತಿನ ನೆರವಿಗೆ ಧಾವಿಸಿದ್ದಾರೆ. ಪ್ರಾಥಮಿಕ ಚಿಕಿತ್ಸೆ ನೀಡಿ, ಅದರ ಆರೈಕೆಗೆ ಮುಂದಾಗಿದ್ದಾರೆ.
ಮೂಕ ಪ್ರಾಣಿಯ ಮೇಲೆ ಕ್ರೌರ್ಯಕ್ಕೆ ಸ್ಥಳೀಯರಿಂದ ಆಕ್ರೋಶ
ದೇವರೆಂದು ಪೂಜಿಸುವ ಮೂಕ ಪ್ರಾಣಿಯ ಮೇಲೆ ಇಂತಹ ಕೃತ್ಯ ನಡೆದಿರುವುದು ಸ್ಥಳೀಯರು ಹಾಗೂ ಪ್ರಾಣಿಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ. ಮಾತನಾಡಲು ಸಾಧ್ಯವಾಗದ ಪ್ರಾಣಿಯ ಮೇಲೆ ಈ ರೀತಿಯ ಕ್ರೌರ್ಯ ಎಸಗಿದವರು ಯಾರು ಎಂಬ ಪ್ರಶ್ನೆ ಇದೀಗ ಎದುರಾಗಿದೆ.
ಪೆಟ್ರೋಲ್ ಅಥವಾ ಆಸಿಡ್ ಸುರಿದು ಬೆಂಕಿ ಹಚ್ಚಲಾಗಿದೆಯೇ ಅಥವಾ ಬೇರೆ ಕಾರಣದಿಂದ ಎತ್ತಿಗೆ ಈ ರೀತಿಯ ಸುಟ್ಟ ಗಾಯಗಳಾಗಿವೆಯೇ ಎಂಬುದು ತನಿಖೆಯಿಂದ ಸ್ಪಷ್ಟವಾಗಬೇಕಿದೆ.


