ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಡಿ.ಕೆ. ಶಿವಕುಮಾರ್ ಅವರು ಇಂದು ತಮ್ಮ ಸ್ವಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ.
ಸಿಎಂ ಆಗಿ ಮೊದಲ ಬಾರಿಗೆ ಕ್ಷೇತ್ರಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಹಾಗೂ ಮತದಾರರು ಸಂಭ್ರಮಾಚರಣೆಯಲ್ಲಿದ್ದಾರೆ.
ಆದರೆ, ಇದೇ ಸಂದರ್ಭದಲ್ಲಿ ಬೆಂಗಳೂರಿನ ಸದಾಶಿವನಗರದಲ್ಲಿರುವ ಮುಖ್ಯಮಂತ್ರಿಗಳ ನಿವಾಸದ ಹಿಂಭಾಗದಲ್ಲಿ ದುಷ್ಕರ್ಮಿಗಳು ಮಾಟ-ಮಂತ್ರ ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದ್ದು, ಭಾರಿ ಸಂಚಲನ ಮೂಡಿಸಿದೆ.
ಸದಾಶಿವನಗರದ ಜಿಬಿಎ (GBA) ಮೈದಾನದ ಮುಂಭಾಗದ ರಸ್ತೆಯಲ್ಲಿ ಈ ಅಘೋರ ಕೃತ್ಯ ನಡೆದಿದೆ. ತಡರಾತ್ರಿ ಅಥವಾ ಮುಂಜಾನೆಯ ವೇಳೆಯಲ್ಲಿ ಸ್ಥಳಕ್ಕೆ ಬಂದಿರುವ ಅಪರಿಚಿತ ಕಿಡಿಗೇಡಿಗಳು, ರಸ್ತೆಯ ಮಧ್ಯದಲ್ಲೇ ವಿಚಿತ್ರವಾದ ವೃತ್ತಾಕಾರದ ರಂಗೋಲಿ ಮಾದರಿಯನ್ನು ಬಿಡಿಸಿದ್ದಾರೆ.
ನೂತನ ಸಿಎಂ ನಿವಾಸಕ್ಕೆ ತೀರಾ ಹತ್ತಿರದಲ್ಲೇ ಈ ರೀತಿಯ ಅನುಮಾನಾಸ್ಪದ ಚಟುವಟಿಕೆ ನಡೆದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಮಾಟ-ಮಂತ್ರ ಮಾಡಿರುವ ಜಾಗದಲ್ಲಿ ರಕ್ತಸಿಕ್ತ ದೃಶ್ಯಗಳು ಕಂಡುಬಂದಿವೆ. ದುಷ್ಕರ್ಮಿಗಳು ವೃತ್ತಾಕಾರದ ಕೃತ್ಯ ನಡೆಸಿ, ಅಲ್ಲಿ ಕೋಳಿಯೊಂದನ್ನು ಕೊಯ್ದು ಬಲಿ ಕೊಟ್ಟಿದ್ದಾರೆ.
ಅಷ್ಟೇ ಅಲ್ಲದೆ, ಮಂತ್ರಿಸಿದ ನಿಂಬೆಹಣ್ಣುಗಳು, ಕುಂಕುಮ, ಅರಿಶಿನ ಹಾಗೂ ಇತರೆ ಪೂಜಾ ಸಾಮಗ್ರಿಗಳನ್ನು ರಸ್ತೆಯುದ್ದಕ್ಕೂ ಚೆಲ್ಲಾಡಿದ್ದಾರೆ. ಮುಖ್ಯಮಂತ್ರಿಗಳ ನಿವಾಸದ ಭದ್ರತೆಯ ದೃಷ್ಟಿಯಿಂದ ಹಾಗೂ ಇಂತಹ ಮೂಢನಂಬಿಕೆಯ ಆಚರಣೆಗಳಿಂದಾಗಿ ಸ್ಥಳೀಯರಲ್ಲಿ ಆತಂಕ ದುಪ್ಪಟ್ಟಾಗಿದೆ.


