ಬೆಂಗಳೂರು: ರಾಜ್ಯ ರಾಜಕಾರಣದ ಅತ್ಯಂತ ಐತಿಹಾಸಿಕ ಹಾಗೂ ಬಹುನಿರೀಕ್ಷಿತ ಕ್ಷಣಕ್ಕೆ ಕೊನೆಗೂ ಸಾಕ್ಷಿಯಾಗಿದೆ ಸಿಲಿಕಾನ್ ಸಿಟಿ. ಹಲವು ತಿಂಗಳುಗಳಿಂದ ನಡೆಯುತ್ತಿದ್ದ ತೀವ್ರ ಕುತೂಹಲ ಹಾಗೂ ರಾಜಕೀಯ ಚರ್ಚೆಗಳಿಗೆ ಅಧಿಕೃತ ತೆರೆಬಿದ್ದಿದ್ದು, ಕೆಪಿಸಿಸಿ ಸಾರಥಿ, ಕಾಂಗ್ರೆಸ್‌ನ ಅಪ್ರತಿಮ ತಂತ್ರಗಾರ ಡಿ.ಕೆ.ಶಿವಕುಮಾರ್ ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಇಂದು ಅಧಿಕಾರ ಸ್ವೀಕರಿಸಿದ್ದಾರೆ.
ಬೆಂಗಳೂರಿನ ಭವ್ಯ ಲೋಕಭವನದ ಆವರಣದಲ್ಲಿ ಆಯೋಜಿಸಲಾಗಿದ್ದ ಅದ್ಧೂರಿ ಹಾಗೂ ಗಣ್ಯರ ಸಮ್ಮುಖದ ಸಮಾರಂಭದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ನೂತನ ಸಿಎಂಗೆ ಅಧಿಕಾರ ಹಾಗೂ ಗೌಪ್ಯತೆಯ ಪ್ರತಿಜ್ಞಾವಿಧಿ ಬೋಧಿಸಿದರು.
ಸಾಂಪ್ರದಾಯಿಕ ಲುಕ್, ವೀರ ಗಂಗಾಧರ ಅಜ್ಜನ ಹೆಸರಲ್ಲಿ ಆಣೆಯಾವಾಗಲೂ ಬಿಳಿ ಜುಬ್ಬಾ-ಪೈಜಾಮದಲ್ಲಿ ಮಿಂಚುತ್ತಿದ್ದ ಡಿ.ಕೆ.ಶಿವಕುಮಾರ್ ಇಂದು ಕಂಪ್ಲೀಟ್ ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸಿದರು.
ರೇಷ್ಮೆ ಪಂಚೆ, ರೇಷ್ಮೆ ಜುಬ್ಬಾ ಹಾಗೂ ಶಲ್ಯ ಧರಿಸಿ ರಾಜ ಗಾಂಭೀರ್ಯದಲ್ಲಿ ವೇದಿಕೆ ಏರಿದ ಡಿಕೆಶಿ, ಕೈಯಲ್ಲಿ ಸಂವಿಧಾನದ ಪುಸ್ತಕ ಹಿಡಿದು ತಮ್ಮ ಆರಾಧ್ಯ ದೈವ ವೀರ ಗಂಗಾಧರ ಅಜ್ಜನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.


