ಧಾರವಾಡ: ಇತ್ತೀಚಿನ ದಿನಗಳಲ್ಲಿ ಸರಣಿ ಕಳ್ಳತನಗಳು ಹೆಚ್ಚಾಗುತ್ತಿದ್ದು, ಇದೀಗ ಹೊಸದಾಗಿ ಪೆಟ್ರೋಲ್ ಕಳ್ಳರ ಗ್ಯಾಂಗ್ ಸಾರ್ವಜನಿಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಧಾರವಾಡ ನಗರದ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹಾಶ್ಮಿನಗರದಲ್ಲಿರುವ ಐಸ್‌ಕ್ರೀಮ್ ಫ್ಯಾಕ್ಟರಿ ಬಳಿ ತಡರಾತ್ರಿ ಬೈಕ್‌ಗಳಿಂದ ಪೆಟ್ರೋಲ್ ಕದ್ದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಕಳೆದ ಒಂದು ವಾರದಿಂದ ಈ ಭಾಗದಲ್ಲಿ ಸತತವಾಗಿ ದ್ವಿಚಕ್ರ ವಾಹನಗಳಿಂದ ಇಂಧನವನ್ನು ಲೂಟಿ ಮಾಡುತ್ತಿರುವ ಖದೀಮರು, ಸ್ಥಳೀಯ ನಿವಾಸಿಗಳಲ್ಲಿ ಆತಂಕ ಮೂಡಿಸಿದ್ದಾರೆ.
ಮನೆಯ ಹೊರಗಡೆ ಸಾರ್ವಜನಿಕರು ನಿಲ್ಲಿಸುವ ಬೈಕ್‌ಗಳೇ ಈ ಕಳ್ಳರ ಪ್ರಮುಖ ಟಾರ್ಗೆಟ್ ಆಗಿದೆ. ತಡರಾತ್ರಿ ಇಡೀ ನಗರ ಮಲಗಿದ ಮೇಲೆ ಹಾಗೂ ರಸ್ತೆಗಳಲ್ಲಿ ಜನರ ಓಡಾಟ ಸಂಪೂರ್ಣವಾಗಿ ಕಡಿಮೆಯಾದ ನಂತರ ಈ ಮೂವರು ಕಿಡಿಗೇಡಿ ಯುವಕರ ಗ್ಯಾಂಗ್ ಕಾರ್ಯಾಚರಣೆಗೆ ಇಳಿಯುತ್ತದೆ.
ಬೈಕ್‌ಗಳ ಪೆಟ್ರೋಲ್ ಪೈಪ್ ಕಟ್ ಮಾಡಿ ಕ್ಷಣಾರ್ಧದಲ್ಲಿ ಕ್ಯಾನ್‌ಗಳಿಗೆ ತುಂಬಿಸಿಕೊಂಡು ಈ ಖದೀಮರು ಪರಾರಿಯಾಗುತ್ತಿದ್ದಾರೆ ಎನ್ನಲಾಗಿದೆ.


