ಬಾಗಲಕೋಟೆ : ಕಾನೂನು ರಕ್ಷಣೆ ಮಾಡಬೇಕಾದ ಅಧಿಕಾರಿಗಳೇ ಭಕ್ಷಕರಾದರೇ? ಬಡವರ ಮೇಲೆ ದರ್ಪ ತೋರುವ ಅಬಕಾರಿ ಇಲಾಖೆ, ಅಕ್ರಮದ ಅಡ್ಡಗಳ ಮುಂದೆ ಮೌನಕ್ಕೆ ಶರಣಾಗಿದೆಯೇ? ಇಂತಹದೊಂದು ಗಂಭೀರ ಪ್ರಶ್ನೆ ಈಗ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲ್ಲೂಕಿನಲ್ಲಿ ಕೇಳಿಬರುತ್ತಿದೆ.
ನಾವಲಗಿ ಗ್ರಾಮದ ನಿವಾಸಿ ಚಂದ್ರವ್ವ ಬಸಪ್ಪ ಕದಮ್ ಎಂಬ ಒಂಟಿ ಮಹಿಳೆಯ ಮೇಲೆ ಜಮಖಂಡಿಯ ಅಬಕಾರಿ ಅಧಿಕಾರಿಗಳು ಅಮಾನವೀಯವಾಗಿ ಹಲ್ಲೆ ನಡೆಸಿದ್ದಾರೆ ಎನ್ನಲಾದ ಘಟನೆ ಬೆಳಕಿಗೆ ಬಂದಿದೆ. ಅಕ್ರಮ ಮದ್ಯ ಮಾರಾಟದ ಶಂಕೆಯಡಿ ಸ್ಥಳ ಪರಿಶೀಲನೆಗೆ ತೆರಳಿದ್ದ ಅಬಕಾರಿ ನಿರೀಕ್ಷಕಿ ಗೀತಾ ತೆಗ್ಗಿ ಹಾಗೂ ಸಿಬ್ಬಂದಿಗಳಾದ ಆನಂದ ಬಾಗಿ, ಹನಮಂತ ರೆಡ್ಡಿ ಮತ್ತು ಕಲ್ಯಾಣಿ, ಮಹಿಳೆಯ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಪೊಲೀಸ್ ಠಾಣೆ ಮೆಟ್ಟಿಲೇರಿದ ಸಂತ್ರಸ್ತೆ:
ಅಧಿಕಾರಿಗಳ ದೌರ್ಜನ್ಯಕ್ಕೆ ಒಳಗಾದ ಚಂದ್ರವ್ವ ಅವರು ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಹಿಳೆಯ ಮೇಲೆ ಹಲ್ಲೆ ನಡೆಸಿ ವಿಕೃತಿ ಮೆರೆದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಂತ್ರಸ್ತೆ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.
ಸಾರ್ವಜನಿಕರ ಆಕ್ರೋಶಕ್ಕೆ ಕಾರಣ ಬಡವರ ಮೇಲೆ ಪ್ರತಾಪ, ಶ್ರೀಮಂತರ ಮುಂದೆ ಮೌನ: ತಾಲ್ಲೂಕಿನಲ್ಲಿ ಎಗ್ಗಿಲ್ಲದೆ ಅಕ್ರಮ ಮದ್ಯ ಮಾರಾಟ ದಂಧೆ ನಡೆಯುತ್ತಿದ್ದರೂ ಅಬಕಾರಿ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ. ಆದರೆ, ಒಬ್ಬ ಒಂಟಿ ಮಹಿಳೆಯ ಮೇಲೆ ಇಷ್ಟೊಂದು ಕ್ರೌರ್ಯ ತೋರಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ನಿಯಮ ಗಾಳಿಗೆ ತೂರಿದ ವೈನ್ ಶಾಪ್‌ಗಳು: ಸಿ ಎಲ್-2 (CL-2) ಪರವಾನಗಿ ಹೊಂದಿರುವ ವೈನ್ ಶಾಪ್‌ಗಳು ಕೇವಲ ಎಂ.ಆರ್.ಪಿ ದರದಲ್ಲಿ ಮದ್ಯ ಮಾರಾಟ ಮಾಡಬೇಕು. ಆದರೆ, ಇಲ್ಲಿನ ಬಹುತೇಕ ವೈನ್ ಶಾಪ್‌ಗಳು ಬಾರ್ ಆಂಡ್ ರೆಸ್ಟೋರೆಂಟ್‌ಗಳಂತೆ ರಾಜಾರೋಷವಾಗಿ ಕುಳಿತು ಕುಡಿಯಲು ವ್ಯವಸ್ಥೆ ಮಾಡಿಕೊಡುತ್ತಿದ್ದರೂ ಅಧಿಕಾರಿಗಳು ಮಾತ್ರ 'ಜಾಣ ಕುರುಡು' ಪ್ರದರ್ಶಿಸುತ್ತಿದ್ದಾರೆ.
ವಸೂಲಿ ದಂಧೆಯ ಆರೋಪ: ದೊಡ್ಡ ದೊಡ್ಡ ಮದ್ಯದ ಅಂಗಡಿಗಳಿಂದ ಮಾಮೂಲಿ ಪಡೆಯುವ ಅಧಿಕಾರಿಗಳು, ಬಡವರ ಮೇಲೆ ಮಾತ್ರ ತಮ್ಮ ಅಧಿಕಾರ ಚಲಾಯಿಸುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
"ಒಬ್ಬ ಒಂಟಿ ಮಹಿಳೆಯ ಮೇಲೆ ಕಾನೂನಿನ ಹೆಸರಿನಲ್ಲಿ ಹಲ್ಲೆ ನಡೆಸಿರುವುದು ಖಂಡನೀಯ. ತಕ್ಷಣವೇ ಹಲ್ಲೆ ನಡೆಸಿದ ಮತ್ತು ಜಾತಿ ನಿಂದನೆ ಮಾಡಿದ ಅಧಿಕಾರಿಗಳನ್ನು ಬಂಧಿಸಿ, ಸೇವೆಯಿಂದ ಅಮಾನತುಗೊಳಿಸಬೇಕು."ಸ್ಥಳೀಯ ಸಾರ್ವಜನಿಕರ ಆಗ್ರಹ ಸದ್ಯ ಬನಹಟ್ಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.
ಈ ಘಟನೆಯು ಅಬಕಾರಿ ಇಲಾಖೆಯ ಕಾರ್ಯವೈಖರಿಯನ್ನು ಬೆತ್ತಲೆ ಮಾಡಿದ್ದು, ತಪ್ಪಿತಸ್ಥ ಅಧಿಕಾರಿಗಳಿಗೆ ಶಿಕ್ಷೆಯಾಗುತ್ತದೆಯೇ ಎಂದು ಕಾದು ನೋಡಬೇಕಿದೆ.
ವರದಿ : ಮಹಾಂತೇಶ್ ಎಸ್ ಹುಲಿಕಟ್ಟಿ

