ತುರುವೇಕೆರೆ : ಮದ್ಯಪಾನದಿಂದ ಸಮಾಜದಲ್ಲಿ ನೂರಾರು ಕುಟುಂಬಗಳು ನಾಶವಾಗುತ್ತಿದೆ. ಸಮಾಜದಲ್ಲಿನ ಮದ್ಯವ್ಯಸನಿಗಳನ್ನು ವ್ಯಸನ ಮುಕ್ತಗೊಳಿಸಿ ನೊಂದ ಕುಟುಂಬವನ್ನು ಆರ್ಥಿಕವಾಗಿ ಸದೃಢರನ್ನಾಗಿಸಲು ಮದ್ಯವರ್ಜನ ಶಿಬಿರ ಸಹಕಾರಿ ಎಂದು ತುಮುಲ್ ನಿದೇರ್ಶಕ ಸಿ.ವಿ.ಮಹಲಿಂಗಯ್ಯ ತಿಳಿಸಿದರು.
ತಾಲ್ಲೂಕಿನ ಮುನಿಯೂರು ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್, ರಾಜ್ಯ ಮಧ್ಯಪಾನ ಮಂಡಳಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ 2061 ನೇ ಮಧ್ಯವರ್ಜನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರು ಸಮಾಜದ ಬಗ್ಗೆ ಅಪಾರ ಕಾಳಜಿಯನ್ನಿಟ್ಟುಕೊಂಡು ಸ್ಥಾಪಿಸಿದ ಯೋಜನೆಯು ನಿರಂತರವಾಗಿ ಸಮಾಜದ ಅಭಿವೃದ್ದಿಗೆ ಶ್ರಮಿಸುತ್ತಿದೆ. ಮಹಿಳಾ ಸಬಲೀಕರಣ, ಹೈನುಗಾರಿಕೆ, ಕೃಷಿ, ಆರ್ಥಿಕ ಸದೃಢತೆ, ಜ್ಞಾನ ವಿಕಾಸದ ಜೊತೆಗೆ ಆರೋಗ್ಯವಂತ ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಮದ್ಯವ್ಯಸನಿಗಳನ್ನು ವ್ಯಸನ ಮುಕ್ತಗೊಳಿಸಿ ಉತ್ತಮ ಬದುಕನ್ನು ರೂಪಿಸಿಕೊಳ್ಳುವುದಕ್ಕೆ ಅವಕಾಶ ಕಲ್ಪಿಸುವ ಮದ್ಯವರ್ಜನ ಶಿಬಿರದಂತಹ ಹತ್ತಾರು ಜನಪರ ಕಾರ್ಯಕ್ರಮಗಳನ್ನು ನಡೆಸುತ್ತಾ ಯಾವುದೇ ಸರ್ಕಾರ ಮಾಡದಂತಹ ಕೆಲಸವನ್ನು ಧರ್ಮಸ್ಥಳ ಸಂಸ್ಥೆ ಮಾಡುತ್ತಿದೆ ಎಂದು ಶ್ಲಾಘಿಸಿದರು.
ಯೋಜನೆಯ ನಿರ್ದೇಶಕ ಸತೀಶ್ ಸುವರ್ಣ ಮಾತನಾಡಿ, ದುಶ್ಚಟಗಳಿಂದ ದೂರವಿದ್ದಲ್ಲಿ ಅಭಿವೃದ್ದಿ ಹೊಂದಬಹುದಾಗಿದೆ. ಆರೋಗ್ಯವಂತವಾಗಿರುವ ದೇಹ ಅನಾರೋಗ್ಯಕ್ಕೆ ತುತ್ತಾಗಿ ಅಕಾಲ ಮೃತ್ಯುವಿಗೆ ಬಲಿಯಾಗಬೇಕಾಗುತ್ತದೆ. ನಿಮ್ಮ ದುಶ್ಚಟಗಳಿಂದ ನೀವು ಮಾತ್ರವಲ್ಲದೆ ನಿಮ್ಮ ಕುಟುಂಬವೂ ಸಂಕಷ್ಟಕ್ಕೆ ಸಿಲಕುತ್ತದೆ. ಇದನ್ನು ಅರಿತ ಧರ್ಮಾಧಿಕಾರಿಗಳು ಯೋಜನೆಯ ಮೂಲಕ ಮದ್ಯವರ್ಜನ ಶಿಬಿರಗಳನ್ನು ಆಯೋಜಿಸಿ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಪಣತೊಟ್ಟಿದ್ದಾರೆ. ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರ ಈ ಕಾರ್ಯಕ್ಕೆ ನಾವೆಲ್ಲರೂ ಕೈಜೋಡಿಸಿ ಆರೋಗ್ಯವಂತ, ವ್ಯಸನ ಮುಕ್ತ ಸಮಾಜ ನಿರ್ಮಾಣ ಕಾರ್ಯದಲ್ಲಿ ಭಾಗಿಯಾಗಬೇಕಿದೆ ಎಂದರು.
ಮದ್ಯವರ್ಜನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಂಗಣ್ಣ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಮುಖಂಡ ಎಂ.ಡಿ.ಮೂರ್ತಿ, ಗುಡಿಗೌಡರಾದ ನಂಜೇಗೌಡರು, ಪತಂಜಲಿ ಯೋಗಶಿಕ್ಷಣ ಸಮಿತಿ ಪ್ರಧಾನ ಕಾರ್ಯದರ್ಶಿ ಪರಮೇಶ್ವರಯ್ಯ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಯೋಗೀಶ್, ರಾಗಿರಂಗೇಗೌಡ, ಲಕ್ಷö್ಮಣ್, ಮುಖಂಡರಾದ ಸೋಮೇನಹಳ್ಳಿ ಜಗದೀಶ್, ಮೂಡಲಗಿರಯ್ಯ, ಯೋಜನಾಧಿಕಾರಿ ಶೇಖರ್ ಶೆಟ್ಟಿ, ಜ್ಞಾನವಿಕಾಸ ಸಮನ್ವಯಾಧಿಕಾರಿ ಆಶಾರಾಣಿ ಸೇರಿದಂತೆ ಯೋಜನೆಯ ಸದಸ್ಯರು, ಸೇವಾ ಪ್ರತಿನಿಧಿಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು.
ವರದಿ : ಗಿರೀಶ್ ಕೆ ಭಟ್


