ಬಳ್ಳಾರಿ: ಬಳ್ಳಾರಿ ನಗರದ ಡಿ.ಸಿ. ಕ್ಯಾಂಪ್ ರಸ್ತೆಯ ಸಮೀಪ ಹರಿಯುವ ಅಂದ್ರಾಳ್ ಹಳ್ಳದಲ್ಲಿ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿರುವ ಘಟನೆ ಸಾರ್ವಜನಿಕರಲ್ಲಿ ಆತಂಕ ಮತ್ತು ಕುತೂಹಲಕ್ಕೆ ಕಾರಣವಾಗಿದೆ. ಇಂದು ಬೆಳಿಗ್ಗೆ ಸ್ಥಳೀಯರು ಹಳ್ಳದ ಬಳಿ ತೆರಳಿದ ವೇಳೆ ನೀರಿನಲ್ಲಿ ಮಹಿಳೆಯ ಶವ ತೇಲುತ್ತಿರುವುದು ಕಂಡುಬಂದಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕಳೆದ ರಾತ್ರಿ ಬಳ್ಳಾರಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದ್ದು, ಹಳ್ಳದಲ್ಲಿ ನೀರಿನ ಹರಿವು ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಮೃತದೇಹ ಮಳೆ ನೀರಿನೊಂದಿಗೆ ಬೇರೆ ಪ್ರದೇಶದಿಂದ ಕೊಚ್ಚಿಕೊಂಡು ಬಂದಿರಬಹುದೇ ಅಥವಾ ಮಹಿಳೆಯನ್ನು ಕೊಲೆ ಮಾಡಿ ಹಳ್ಳಕ್ಕೆ ಎಸೆದಿರಬಹುದೇ ಎಂಬ ಅನುಮಾನಗಳು ವ್ಯಕ್ತವಾಗಿವೆ. ಘಟನೆಯು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಮೃತದೇಹದ ಸ್ಥಿತಿ ನೋಡಿದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಮೃತ ಮಹಿಳೆಯ ಶವವು ಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಪ್ರಕರಣದ ಸುತ್ತ ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿದೆ. ಇದರಿಂದ ಇದು ಕೇವಲ ಅಪಘಾತವೋ, ಆತ್ಮಹತ್ಯೆಯೋ ಅಥವಾ ಕೊಲೆ ಪ್ರಕರಣವೋ ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಗಳು ಆರಂಭವಾಗಿವೆ. ಮಹಿಳೆಯ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.
ಸುದ್ದಿ ತಿಳಿಯುತ್ತಿದ್ದಂತೆಯೇ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಸ್ಥಳಕ್ಕೆ ಆಗಮಿಸಿ ಘಟನಾ ಸ್ಥಳವನ್ನು ವೀಕ್ಷಣೆ ನಡೆಸಿದರು. ಮಹಿಳೆಯ ಮೃತದೇಹ ಕಂಡುಬಂದ ಹಿನ್ನೆಲೆಯಲ್ಲಿ ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಪ್ರಕರಣದ ಸಂಪೂರ್ಣ ಸತ್ಯಾಂಶ ಬಹಿರಂಗವಾಗಬೇಕೆಂದು ಆಗ್ರಹಿಸಿದ್ದಾರೆ.
ಮಾಹಿತಿ ಪಡೆದ ಎ.ಪಿ.ಎಂ.ಸಿ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸುವ ಪ್ರಕ್ರಿಯೆ ಕೈಗೊಂಡಿದ್ದಾರೆ. ಸ್ಥಳದಲ್ಲಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲಾಗುತ್ತಿದ್ದು, ಮಹಿಳೆಯ ಗುರುತು ಪತ್ತೆ ಹಾಗೂ ಸಾವಿನ ನಿಖರ ಕಾರಣ ತಿಳಿಯಲು ತನಿಖೆ ಆರಂಭಿಸಲಾಗಿದೆ.
ಪ್ರಾಥಮಿಕ ತನಿಖೆಯ ಬಳಿಕವೇ ಮಹಿಳೆಯ ಸಾವಿನ ಹಿಂದಿನ ನಿಜವಾದ ಕಾರಣ ಬಹಿರಂಗವಾಗಲಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಪ್ರಕರಣದ ಕುರಿತು ಸ್ಪಷ್ಟ ಚಿತ್ರಣ ದೊರೆಯುವ ಸಾಧ್ಯತೆ ಇದೆ. ಸದ್ಯ ಪ್ರಕರಣವು ಬಳ್ಳಾರಿ ಎ.ಪಿ.ಎಂ.ಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರೆಸಿದ್ದಾರೆ.


