ತುರುವೇಕೆರೆ: ಸರ್ಕಾರದ ನಂತರ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಅತಿ ಹೆಚ್ಚು ಶಿಕ್ಷಕರನ್ನು ಒದಗಿಸಿಕೊಟ್ಟ ಕೀರ್ತಿ ಧರ್ಮಸ್ಥಳ ಸಂಸ್ಥೆಗೆ ಸಲ್ಲುತ್ತದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್ ತುರುವೇಕೆರೆ ಗ್ರಾಮಾಂತರ ಯೋಜನಾ ಕಚೇರಿ ವ್ಯಾಪ್ತಿಯ ನಾಗಮಂಗಲ ತಾಲೂಕು ಹೊಸಮನೆ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಡಿ ಮಂಜೂರಾದ ಅತಿಥಿ ಶಿಕ್ಷಕರ ಮಂಜೂರಾತಿ ಪತ್ರವನ್ನು ಶಾಲೆಯ ಮುಖ್ಯ ಶಿಕ್ಷಕರಿಗೆ ಹಸ್ತಾಂತರ ಮಾಡಿ ಮಾತನಾಡಿದರು.
ಪ್ರತಿ ವರ್ಷ ಧರ್ಮಸ್ಥಳದ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಶಿಕ್ಷಕರ ಕೊರತೆ ಇರುವ ಸರಕಾರಿ ಮತ್ತು ಅನುದಾನಿತ ಶಾಲೆಗಳಿಗೆ 1000 ಅತಿಥಿ ಶಿಕ್ಷಕರನ್ನು ಒದಗಿಸುತ್ತಿದ್ದು ಸರಕಾರದ ನಂತರ ಅತಿ ಹೆಚ್ಚು ಶಿಕ್ಷಕರನ್ನು ಒದಗಿಸುತ್ತಿರುವ ಸಂಸ್ಥೆಯಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಹೆಸರಾಗಿದೆ ಎಂದರು.
ಇದಲ್ಲದೆ ಮೂಲ ಸೌಕರ್ಯದ ಕೊರತೆ ಇರುವ ಸರಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಬೆಂಚು ಡೆಸ್ಕ್ ಗಳನ್ನು ಒದಗಿಸುತ್ತಿದ್ದು, ಈ ವರ್ಷ ರಾಜ್ಯದ 700 ಶಾಲೆಗೆ ಬೆಂಚ್ ಡೆಸ್ಕ್ ಗಳನ್ನು ಒದಗಿಸಲಾಗಿದೆ. ಪ್ರತಿವರ್ಷ ಶೈಕ್ಷಣಿಕ ವರ್ಷದ ಕೊನೆಯ 3 ತಿಂಗಳು ಸರಕಾರಿ ಮತ್ತು ಅನುದಾನಿತ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ವಿಶೇಷ ಅಭ್ಯಾಸ ತರಗತಿ ( ಟ್ಯೂಷನ್ ಕ್ಲಾಸ್ ) ಯನ್ನು ಒದಗಿಸಿಕೊಟ್ಟು ಸರಕಾರಿ ಶಾಲೆಯ ವಿದ್ಯಾರ್ಥಿಗಳು ಕೂಡ 10 ನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯುವಲ್ಲಿ ಸಹಕಾರ ನೀಡುತ್ತಿದೆ. ಶಾಲೆಯ ಕೊಠಡಿ ರಚನೆ, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ನಿರ್ಮಾಣಕ್ಕೆ ಸಂಸ್ಥೆಯಿಂದ ಅನುದಾನ ನೀಡಲಾಗುತ್ತಿದೆ. ಯೋಜನೆಯ ಸ್ವಸಹಾಯ ಸಂಘದಲ್ಲಿ ಇರುವ ಸದಸ್ಯರ ಮಕ್ಕಳ 10 ನೇ ತರಗತಿಯ ನಂತರದ ವೃತ್ತಿಪರ ಶಿಕ್ಷಣಕ್ಕೆ ಅನುಕೂಲ ವಾಗುವಂತೆ ರೂ 400 ರಿಂದ 1000 ವರೆಗೆ ಕೋರ್ಸ್ ಮುಗಿಯುವವರೆಗೆ ಪ್ರತಿ ತಿಂಗಳು ಸುಜ್ಞಾನ ನಿಧಿ ಶಿಷ್ಯ ವೇತನ ವನ್ನು ಕೊಡಲಾಗುತ್ತಿದ್ದು ರಾಜ್ಯದಾದ್ಯಂತ ಇದುವರೆಗೆ 1,47,635 ವಿದ್ಯಾರ್ಥಿಗಳಿಗೆ 186 ಕೋಟಿ ಮೊತ್ತ ವಿನಿಯೋಗಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತುರುವೇಕೆರೆ ಗ್ರಾಮಾಂತರ ಯೋಜನಾ ಕಚೇರಿಯ ಯೋಜನಾಧಿಕಾರಿ ಶೇಖರ್ ಶೆಟ್ಟಿ, ವಲಯದ ಮೇಲ್ವಿಚಾರಕಿ ಪ್ರೇಮಾ, ಎಸ್.ಡಿ.ಎಂ.ಸಿ. ಅಧ್ಯಕ್ಷ ಚಿರಂಜೀವಿ ಮತ್ತು ಶಿಕ್ಷಕ ವರ್ಗದವರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್


