ಬೆಳಗಾವಿ: ತಂದೆಯಿಲ್ಲದ ಮೊಮ್ಮಗನನ್ನು ಕೂಲಿ ಮಾಡಿ ಸಾಕಿ, ಸಲಹಿ, ಮದುವೆ ಮಾಡಿ ಸಂಸಾರ ಹೂಡಿಕೊಟ್ಟ ಅಜ್ಜಿಯನ್ನೇ ಮೊಮ್ಮಗನೊಬ್ಬ ಹಣದ ವ್ಯಾಮೋಹಕ್ಕಾಗಿ ಅತ್ಯಂತ ಕ್ರೂರವಾಗಿ ಚಾಕುವಿನಿಂದ ಇರಿದು ಕೊಂದಿರುವ ಧೃತಿಗೆಡಿಸುವ ಘಟನೆ ಬೆಳಗಾವಿ ತಾಲೂಕಿನ ಅಗಸಗಿ ಗ್ರಾಮದಲ್ಲಿ ಜರುಗಿದೆ.
ಅಗಸಗಿ ಗ್ರಾಮದ ಪಾಟೀಲ ಗಲ್ಲಿಯ ನಿವಾಸಿ ಬಾಲವ್ವ ಕಲ್ಲಪ್ಪ ಪಾಟೀಲ (70) ಕೊಲೆಯಾದ ದುರ್ದೈವಿ ವೃದ್ಧೆ. ಆಕೆಯ ಮೊಮ್ಮಗ ಕಲಗೌಡ ಅಪ್ಪಯ್ಯಗೌಡ ಪಾಟೀಲ (25) ಕೊಲೆ ಮಾಡಿ ತಲೆಮರೆಸಿಕೊಂಡಿರುವ ನರಾಧಮ ಆರೋಪಿಯಾಗಿದ್ದಾನೆ.
ಐಷಾರಾಮಿ ಜೀವನದ ವ್ಯಾಮೋಹ – ಹೆಂಡತಿಗೂ ಕಿರುಕುಳ
ಕಳೆದ ಎರಡು ವರ್ಷಗಳಿಂದ ಬೈಕ್ ಹಾಗೂ ಐಷಾರಾಮಿ ಜೀವನ ಶೈಲಿಗಾಗಿ ಹಣ ನೀಡುವಂತೆ ಆರೋಪಿ ಕಲಗೌಡ ತನ್ನ ಅಜ್ಜಿ ಮತ್ತು ಪತ್ನಿಗೆ ನಿರಂತರವಾಗಿ ಪೀಡಿಸುತ್ತಿದ್ದ. ಇವನ ಕಿರುಕುಳ ತಾಳಲಾರದೆ ಪತ್ನಿ ತಿಂಗಳ ಹಿಂದಷ್ಟೇ ತವರು ಮನೆ ಸೇರಿದ್ದಳು. ಆದರೂ ಮೊಮ್ಮಗನ ಮೇಲಿನ ಮಮತೆಯಿಂದ ಅಜ್ಜಿ ಬಾಲವ್ವ ಆತನ ಊಟ, ಬಟ್ಟೆ ಹಾಗೂ ಜೀವನೋಪಾಯಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದರು. ಆದರೆ, ಕುಡಿತ ಹಾಗೂ ಜೂಜಾಟಕ್ಕೆ ದಾಸನಾಗಿದ್ದ ಆರೋಪಿ, ಹಣಕ್ಕಾಗಿ ಅಜ್ಜಿಗೆ ನಿರಂತರವಾಗಿ ದೈಹಿಕ ಹಿಂಸೆ ನೀಡುತ್ತಿದ್ದನು.
ಹೆದ್ದಾರಿಯಲ್ಲೇ ಇದ್ದರೂ ಅಸಹಾಯಕರ ಕೂಗು ಕೇಳದ ಕಾಕತಿ ಠಾಣೆ!
ಘಟನೆಯ ಹಿಂದಿನ ದಿನ ಆರೋಪಿ ಕಲಗೌಡ, ಅಜ್ಜಿಯನ್ನು ಮನೆಯೊಳಗೆ ಕೂಡಿ ಹಾಕಿ ಮನಸೋಇಚ್ಛೆ ಥಳಿಸಿ, ಕೊಲೆಗೆ ಯತ್ನಿಸಿದ್ದನು. ಇದರಿಂದ ತೀವ್ರ ಭೀತಿಗೊಳಗಾದ ವೃದ್ಧೆ ಹೇಗೋ ತಪ್ಪಿಸಿಕೊಂಡು, ನೇರವಾಗಿ ಬಸ್ ಹತ್ತಿ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲೇ ಇರುವ ಕಾಕತಿ ಪೊಲೀಸ್ ಠಾಣೆಗೆ ಬಂದು ತನ್ನ ಪ್ರಾಣ ರಕ್ಷಿಸುವಂತೆ ಮುದ್ದಾಂ ದೂರು ನೀಡಿದ್ದರು.
ಆದರೆ, ಕಾಕತಿ ಠಾಣೆಯ ಸಿಪಿಐ ಹಾಗೂ ಎಸ್‌ಐ ನೇತೃತ್ವದ ಇಲಾಖೆಯ ವಿರುದ್ಧ ಈಗ ಸಾರ್ವಜನಿಕರು ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ಮೇಲೆಯೇ ಇರುವ ಈ ಠಾಣೆಯ ಪೊಲೀಸರಿಗೆ, ಹೆದ್ದಾರಿಯಲ್ಲಿ ಓಡಾಡುವ ಸಾಮಾನ್ಯ ಜನರನ್ನು ತಡೆದು, ವಾಹನ ತಪಾಸಣೆ ನಡೆಸಿ, ದಂಡ ವಸೂಲಿ ಮಾಡಿ ಸರ್ಕಾರದ ಬೊಕ್ಕಸ ತುಂಬಿಸುವುದರಲ್ಲೇ ಹೆಚ್ಚಿನ ಆಸಕ್ತಿ! ಅಸಹಾಯಕರು, ಬಡವರು ಪ್ರಾಣಭಿಕ್ಷೆ ಬೇಡಿ ಠಾಣೆಗೆ ಬಂದರೆ ಕಾನೂನಿನ ಪಾಠ ಹೇಳುವ ಇವರು, ದಂಡದ ಟಾರ್ಗೆಟ್ ಮುಟ್ಟಿಸುವ ಧಾವಂತದಲ್ಲಿ ಸಾರ್ವಜನಿಕರ ಅಳಲನ್ನು ಕೇಳಿಸಿಕೊಳ್ಳುವ ಕನಿಷ್ಠ ಸೌಜನ್ಯವನ್ನೂ ಮರೆತಿದ್ದಾರೆ ಎಂಬುದಕ್ಕೆ ಈ ದುರಂತವೇ ಸಾಕ್ಷಿ.
ಪೊಲೀಸರು ಈ ದೂರನ್ನು ಗಂಭೀರವಾಗಿ ಪರಿಗಣಿಸಿದ್ದರೆ ಇಂದು ಆ ಜೀವ ಉಳಿಯುತ್ತಿತ್ತು. ಆದರೆ, ವೃದ್ಧೆಗೆ ಸೂಕ್ತ ರಕ್ಷಣೆ ನೀಡಿ, ಆರೋಪಿಯ ವಿರುದ್ಧ ಕಾನೂನು ಕ್ರಮ ಜರುಗಿಸುವ ಬದಲಿಗೆ, ಆಕೆಯನ್ನು ಮರಳಿ ಮನೆಗೆ ತಂದು ಬಿಟ್ಟು ಅಷ್ಟಕ್ಕೇ ಕೈ ತೊಳೆದುಕೊಂಡಿದ್ದಾರೆ. ಪೊಲೀಸರು ಹೋದ ತಕ್ಷಣವೇ ಅಹಂಕಾರದಿಂದ ಗರ್ಜಿಸಿದ ಆರೋಪಿ, "ನಿನ್ನ ಪೊಲೀಸರು ಸಹ ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ" ಎಂದು ಕೂಗಾಡುತ್ತಾ, ತನ್ನ ಬಳಿಯಿದ್ದ ಚಾಕುವಿನಿಂದ ಅಜ್ಜಿಯ ಎದೆಗೆ ಚುಚ್ಚಿದ್ದಾನೆ. ತೀವ್ರ ರಕ್ತಸ್ರಾವದಿಂದಾಗಿ ವೃದ್ಧೆ ನಿಮಿಷಾರ್ಧದಲ್ಲೇ ಪ್ರಾಣ ಬಿಟ್ಟಿದ್ದಾಳೆ.
ರಕ್ತಸಿಕ್ತವಾದ '112' ಕಾಗದ ಇಲಾಖೆಯನ್ನೇ ಅಣಕಿಸುತ್ತಿದೆ!
ಠಾಣೆಗೆ ಹೋಗಿದ್ದ ವೃದ್ಧೆಗೆ ಅಲ್ಲಿನ ಪೊಲೀಸರು ತುರ್ತು ಸಹಾಯಕ್ಕಾಗಿ '112' ನಂಬರ್ ಬರೆದ ಕಾಗದದ ಚೂರನ್ನು ನೀಡಿ, ತೊಂದರೆಯಾದಾಗ ಕರೆ ಮಾಡುವಂತೆ ಹೇಳಿ ಜವಾಬ್ದಾರಿಯಿಂದ ನುಣುಚಿಕೊಂಡಿದ್ದರು. ಆರೋಪಿ ಚಾಕುವಿನಿಂದ ಇರಿದಾಗ ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಜ್ಜಿ, ತನ್ನ ಕೊನೆಯುಸಿರಿಗೂ ಮುನ್ನ ಆ ರಕ್ತಸಿಕ್ತ ಕಾಗದವನ್ನು ಅಲ್ಲಿದ್ದವರಿಗೆ ನೀಡಿ, "ಈ ನಂಬರ್‌ಗೆ ಕರೆ ಮಾಡಿ ಪೊಲೀಸರನ್ನು ಕರೆಸಿ, ಇವನನ್ನು ಜೈಲಿಗೆ ಹಾಕಿ" ಎಂದು ಹೇಳಿ ಕಣ್ಣು ಮುಚ್ಚಿರುವುದು ನೆರೆದಿದ್ದವರ ಕರುಳು ಹಿಂಡುವಂತಿದೆ. ಪೊಲೀಸರು ನೀಡಿದ ಆ ಕಾಗದದ ಚೂರು ಈಗ ಇಡೀ ಪೊಲೀಸ್ ಇಲಾಖೆಯ ಕರ್ತವ್ಯ ಪ್ರಜ್ಞೆಯನ್ನೇ ಅಣಕಿಸುವಂತಿದೆ.
ಪೊಲೀಸ್ ವೈಫಲ್ಯದ ವಿರುದ್ಧ ತೀವ್ರ ಆಕ್ರೋಶ
ಪ್ರಾಣಭಿಕ್ಷೆ ಬೇಡಿ ಠಾಣೆಯ ಮೆಟ್ಟಿಲೇರಿದರೂ ವೃದ್ಧೆಯ ಜೀವ ಉಳಿಸಲಾಗದ ಕಾಕತಿ ಠಾಣೆಯ ಎಸ್‌ಎಚ್‌ಒ ಹಾಗೂ ಹೊಯ್ಸಳ ಸಿಬ್ಬಂದಿಯ ಬೇಜವಾಬ್ದಾರಿತನದ ವಿರುದ್ಧ ಇಡೀ ಬೆಳಗಾವಿ ಜನತೆ ಕೆಂಡಮಂಡಲವಾಗಿದೆ. ಘಟನೆಯ ತೀವ್ರತೆ ಅರಿತು ತಡರಾತ್ರಿಯೇ ಡಿಸಿಪಿ ನಾರಾಯಣ ಬರಮನಿ ಹಾಗೂ ಎಸಿಪಿ ಗಂಗಾಧರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಪ್ರಸ್ತುತ ಪಿಐ ಸುರೇಶ ಶಿಂಗಿ ಹಾಗೂ ಮಂಜುನಾಥ ನಾಯಕ ನೇತೃತ್ವದ ತಂಡ ಅಗಸಗಿ ಗ್ರಾಮದಲ್ಲಿ ಮೊಕ್ಕಾಂ ಹೂಡಿದ್ದು, ತಲೆಮರೆಸಿಕೊಂಡಿರುವ ಕ್ರೂರಿ ಮೊಮ್ಮಗನಿಗಾಗಿ ಜಾಲ ಬೀಸಿದ್ದಾರೆ. ಆದರೆ, ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸದ ಕಾಕತಿ ಪೊಲೀಸರ ಈ ನಡೆ ಇಡೀ ಪೊಲೀಸ್ ಇಲಾಖೆಯ ಚರಿತ್ರೆಗೇ ಒಂದು ಕಪ್ಪು ಚುಕ್ಕೆಯಾಗಿ ಉಳಿಯುವಂತಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರದಿ: ಉಮೇಶ ಗೌರಿ


