ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಯಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಇಂದು (ಬುಧವಾರ) ಅಧಿಕಾರ ಚುಕ್ಕಾಣಿ ಹಿಡಿಯಲಿದ್ದಾರೆ.
ಸಂಜೆ 4.05ಕ್ಕೆ ಲೋಕಸೌಧದ ಭವ್ಯ ಗಾಜಿನಮನೆಯಲ್ಲಿ ಈ ಅದ್ಧೂರಿ ಪ್ರಮಾಣ ವಚನ ಸಮಾರಂಭ ನೆರವೇರಲಿದ್ದು, ಇಡೀ ಸಿಲಿಕಾನ್ ಸಿಟಿ ಮದುವಣಗಿತ್ತಿಯಂತೆ ಕಂಗೊಳಿಸುತ್ತಿದೆ.
ದೇಶದ ಮೂಲೆ ಮೂಲೆಗಳಿಂದ ಸುಮಾರು 500ಕ್ಕೂ ಅಧಿಕ ಗಣ್ಯಾತಿಗಣ್ಯರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ. ವಿವಿಐಪಿಗಳ ಆಗಮನದ ಹಿನ್ನೆಲೆಯಲ್ಲಿ ಭದ್ರತೆಯನ್ನು ಗರಿಷ್ಠ ಮಟ್ಟಕ್ಕೆ ಹೆಚ್ಚಿಸಲಾಗಿದೆ.
ಲೋಕಸೌಧದ ಸುತ್ತಮುತ್ತ ಯಾರಿಗೂ ಪ್ರವೇಶವಿಲ್ಲದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಕೆಪಿಸಿಸಿ ಕಚೇರಿ ಹಾಗೂ ಶಾಂಗ್ರಿಲಾ ಹೋಟೆಲ್ ವ್ಯಾಪ್ತಿಯನ್ನು 'ನೋ ಫ್ಲೈ ಜೋನ್' (ಡ್ರೋನ್ ಹಾಗೂ ಹಾರಾಟ ನಿಷೇಧಿತ ವಲಯ) ಎಂದು ಘೋಷಿಸಲಾಗಿದೆ.
ಸಂಚಾರ ದಟ್ಟಣೆ ನಿಯಂತ್ರಿಸಲು ಲೋಕಭವನದ ಆಸುಪಾಸಿನ ರಸ್ತೆಗಳಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಸಾರ್ವಜನಿಕರ ಸುರಕ್ಷತೆಗಾಗಿ ಪಾದಚಾರಿ ಮಾರ್ಗಗಳ ಯುದ್ಧಕ್ಕೂ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ.
ಕಾರ್ಯಕ್ರಮ ನಡೆಯುವ ಮುಖ್ಯ ಸಭಾಂಗಣಕ್ಕೆ ಎಲ್ಲರಿಗೂ ಪ್ರವೇಶ ಸಿಗದೇ ಇರಬಹುದು, ಆದರೆ ಅಭಿಮಾನ ನಿರಾಸೆಯಾಗಬಾರದು ಎಂಬ ಕಾರಣಕ್ಕೆ ಹೈಟೆಕ್ ವ್ಯವಸ್ಥೆ ಮಾಡಲಾಗಿದೆ.
ವಿಧಾನಸೌಧದ ಮುಂಭಾಗ, ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನ ಹಾಗೂ ರೇಸ್‌ಕೋರ್ಸ್ ರಸ್ತೆಯ ಕಾಂಗ್ರೆಸ್ ಕಚೇರಿ ಆವರಣದಲ್ಲಿ ದೈತ್ಯ ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗಿದೆ. ಸಮಾರಂಭದ ಪ್ರತಿಯೊಂದು ಕ್ಷಣವೂ ಈ ಸ್ಕ್ರೀನ್‌ಗಳಲ್ಲಿ ನೇರ ಪ್ರಸಾರವಾಗಲಿದ್ದು, ಸಾರ್ವಜನಿಕರು ಲೈವ್ ಆಗಿ ವೀಕ್ಷಿಸಬಹುದಾಗಿದೆ.


