ಬೆಂಗಳೂರು : ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿ ಅಧಿಕೃತಗೊಳ್ಳುತ್ತಿದ್ದಂತೆ, ಇಷ್ಟು ದಿನಗಳ ಕಾಲ ರಾಜಕೀಯ ವಲಯದಲ್ಲಿದ್ದ ಆತಂಕ ಈಗ ಸಿಎಂ ಕಚೇರಿಯ ನೌಕರರಲ್ಲಿ ಭಾವುಕತೆಗೆ ಕಾರಣವಾಗಿದೆ.
ಇಂದು ಸಂಜೆ ಜಾತಿಗಣತಿ ವರದಿ ಸ್ವೀಕರಿಸಲು ವಿಧಾನಸೌಧಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಂಡು ಸಿಬ್ಬಂದಿ ಕಣ್ಣೀರು ಹಾಕಿದ ಘಟನೆ ಜರುಗಿದೆ.
ಇಂದು ಸಂಜೆ ನಿಗದಿಯಂತೆ ಹಿಂದುಳಿದ ವರ್ಗಗಳ ಆಯೋಗದಿಂದ ಜಾತಿಗಣತಿ ವರದಿ ಸ್ವೀಕರಿಸಲು ಸಿಎಂ ಸಿದ್ದರಾಮಯ್ಯ ಅವರು ವಿಧಾನಸೌಧಕ್ಕೆ ಆಗಮಿಸಿದರು.
ಸಿಎಂ ಬರುತ್ತಿದ್ದಂತೆ ಅಲ್ಲಿ ನೆರೆದಿದ್ದ ಮುಖ್ಯಮಂತ್ರಿ ಕಚೇರಿಯ ನೌಕರರು ಹಾಗೂ ಪ್ರಮುಖವಾಗಿ ಗುತ್ತಿಗೆ (Contract) ಆಧಾರದ ಮೇಲೆ ಕೆಲಸ ಮಾಡುತ್ತಿರುವ ಸಿಬ್ಬಂದಿ ಸಿದ್ದರಾಮಯ್ಯ ಅವರನ್ನು ನೋಡಿ ತಡೆಯಲಾರದೆ ಕಣ್ಣೀರು ಹಾಕಲು ಆರಂಭಿಸಿದರು.
"ಸರ್, ಯಾವುದೇ ಕಾರಣಕ್ಕೂ ನೀವು ರಾಜೀನಾಮೆ ನೀಡಬೇಡಿ ಸರ್ ಪ್ಲೀಸ್..." ಎಂದು ಸಿಬ್ಬಂದಿ ಕಣ್ಣೀರಿಡುತ್ತಾ ಮುಖ್ಯಮಂತ್ರಿಗಳ ಮುಂದೆ ಕೈಮುಗಿದು ಬೇಡಿಕೊಂಡರು.
ಸಿಬ್ಬಂದಿಯ ಈ ಭಾವುಕತೆಯನ್ನು ಕಂಡು ಕೊಂಚ ಭಾವುಕರಾದ ಸಿಎಂ ಸಿದ್ದರಾಮಯ್ಯ, ತಕ್ಷಣವೇ ತಮ್ಮ ವಿಶಿಷ್ಟ ಶೈಲಿಯ ಕೈಸನ್ನೆಯ ಮೂಲಕವೇ ಸಮಾಧಾನಪಡಿಸಿ, ಧೈರ್ಯ ತುಂಬಿ ಮುಂದೆ ಸಾಗಿದರು. ಸಿಎಂ ಕಚೇರಿ ಇತಿಹಾಸದಲ್ಲಿ ಇಂತಹದ್ದೊಂದು ಭಾವುಕ ನಡೆ ಕಂಡುಬಂದಿರುವುದು ಇದೇ ಮೊದಲು ಎನ್ನಲಾಗಿದೆ.


