ಬೆಳಗಾವಿ: ಹೆಚ್ಚಿನ ಬಡ್ಡಿ ನೀಡುವ ಆಮಿಷವೊಡ್ಡಿ ಕೋಟ್ಯಂತರ ರೂಪಾಯಿ ಸಂಗ್ರಹಿಸಿದ ಆರೋಪ ಎದುರಿಸುತ್ತಿರುವ ಶಿವಂ ಅಸೋಸಿಯೇಟ್ಸ್ (hivam Associates) ಕಂಪನಿಯ ಎಂ.ಡಿ ಶಿವಾನಂದ ನೀಲಣ್ಣವರಿಗೆ ಶುಕ್ರವಾರ ಇಡಿ (ED ) ಶಾಕ್ ನೀಡಿದೆ.
ಬೆಳಗಾವಿಯ ಶಿವಬಸವ ನಗರದ ಅಪಾರ್ಟ್‌ಮೆಂಟ್‌ನಲ್ಲಿರುವ ಶಿವಾನಂದ ನೀಲಣ್ಣವರ ನಿವಾಸದ ಮೇಲೆ ಶುಕ್ರವಾರ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಈಗಾಗಲೇ ಬರ್ಡ್ಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಸಿಐಡಿ ತನಿಖೆ ನಡೆಯುತ್ತಿರುವ ಬೆನ್ನಲ್ಲೇ ಇಡಿ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡಿದ್ದಾರೆ.
ದಾಳಿಯ ವೇಳೆ ಶಿವಾನಂದ ನೀಲಣ್ಣವರ ಪತ್ನಿ ಸಂಗೀತಾ ಹಾಗೂ ಅಳಿಯ ಸಂಜು ಅವರನ್ನು ಇಡಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಮಂಗಳೂರು ಹಾಗೂ ಗೋವಾ ಘಟಕದ ಇಡಿ ಅಧಿಕಾರಿಗಳ ತಂಡ ಈ ದಾಳಿಯಲ್ಲಿ ಭಾಗಿಯಾಗಿದ್ದು, ಮನೆ ಹಾಗೂ ದಾಖಲೆಗಳ ಪರಿಶೀಲನೆ ನಡೆಸುತ್ತಿದೆ. ಶಿವಾನಂದ ನೀಲಣ್ಣವರ ಆಪ್ತರ ನಿವಾಸಗಳ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬೆಳಗಾವಿ ಜಿಲ್ಲೆಯ ಬಡಕುಂದ್ರಿ ಗ್ರಾಮದಲ್ಲಿರುವ ನಿವಾಸದ ಮೇಲೆ ಇಡಿ ಅಧಿಕಾರಿಗಳು ಶೋಧ ನಡೆಸಿದ್ದು, ಚಿಕ್ಕೋಡಿಯಲ್ಲಿರುವ ಸುಭಾಷ್ ಅವರ ಮನೆಯ ಮೇಲೂ ದಾಳಿ ನಡೆದಿದೆ. ಈ ಪ್ರಕರಣದಲ್ಲಿ ಕಳೆದ ಮೇ 15ರಂದು ಬೆಳಗಾವಿ ಎಸಿ ನೇತೃತ್ವದಲ್ಲಿ ಮೊದಲ ಹಂತದ ದಾಳಿ ನಡೆದಿತ್ತು.
ಬಳಿಕ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಂತರ ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಲಾಗಿತ್ತು. ಸಿಐಡಿ ತನಿಖೆ ಮುಂದುವರಿದಿರುವ ನಡುವೆಯೇ ಇದೀಗ ಇಡಿ ದಾಳಿ ನಡೆಸಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.


