ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನವೊಂದು ಸೃಷ್ಟಿಯಾಗಿದ್ದು, ಹಿರಿಯ ಕಾಂಗ್ರೆಸ್ ನಾಯಕ ರಾಮಲಿಂಗಾರೆಡ್ಡಿ ಅವರು ತಮ್ಮ ಸಚಿವ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ್ದಾರೆ.
ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಕೆಲವೇ ದಿನಗಳು ಕಳೆಯುವಷ್ಟರಲ್ಲಿ, ನೂತನ ಸಚಿವ ಸಂಪುಟದ ವಿರುದ್ಧ ಅಸಮಾಧಾನಗೊಂಡು ರಾಮಲಿಂಗಾರೆಡ್ಡಿ ಈ ನಿರ್ಧಾರ ಕೈಗೊಂಡಿರುವುದು ರಾಜ್ಯ ಕಾಂಗ್ರೆಸ್ ವಲಯದಲ್ಲಿ ತಲ್ಲಣ ಮೂಡಿಸಿದೆ.
ನನಗೆ ನೀಡಿದರೆ ಬೆಂಗಳೂರು ನಗರ ಅಭಿವೃದ್ಧಿ ಖಾತೆಯನ್ನೇ ನೀಡಬೇಕು, ಇಲ್ಲವಾದರೆ ನಾನು ಕೇವಲ ಶಾಸಕನಾಗಿ ಮುಂದುವರಿಯಲು ಸಿದ್ಧ ಎಂದು ರಾಮಲಿಂಗಾರೆಡ್ಡಿ ಹೈಕಮಾಂಡ್ ಹಾಗೂ ರಾಜ್ಯ ನಾಯಕತ್ವಕ್ಕೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ತಮಗೆ ಒಲಿದಿದ್ದ ಸಚಿವ ಸ್ಥಾನವನ್ನು ತ್ಯಜಿಸುವ ಮೂಲಕ, ಬೆಂಗಳೂರು ನಗರದ ಜವಾಬ್ದಾರಿ ಸಿಗದಿದ್ದರೆ ತಮಗೆ ಸಚಿವ ಸ್ಥಾನವೇ ಬೇಡ ಎಂಬ ಕಡಕ್ ನಿಲುವನ್ನು ಅವರು ಎಳೆದಿದ್ದಾರೆ.
ರಾಜೀನಾಮೆ ನೀಡಿದ ಬೆನ್ನಲ್ಲೇ ಬೆಂಗಳೂರಿನ ಕೋರಮಂಗಲದಲ್ಲಿರುವ ತಮ್ಮ ಕಚೇರಿಯಲ್ಲಿ ರಾಮಲಿಂಗಾರೆಡ್ಡಿ ತುರ್ತು ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ.
"ನಾನು ಸಚಿವ ಸ್ಥಾನಕ್ಕೆ ಮಾತ್ರ ರಾಜೀನಾಮೆ ನೀಡಿದ್ದೇನೆ ವಿನಃ ಕಾಂಗ್ರೆಸ್ ಪಕ್ಷವನ್ನಲ್ಲ. ನಾನು ಎಂದಿಗೂ ಕಾಂಗ್ರೆಸ್‌ನಲ್ಲೇ ಇರುತ್ತೇನೆ. ಪಕ್ಷಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ" ಎಂದು ಹೇಳುವ ಮೂಲಕ ತಾವೊಬ್ಬ ನಿಷ್ಠಾವಂತ ಕಾಂಗ್ರೆಸ್ಸಿಗ ಎಂಬುದನ್ನು ಅವರು ಪುನರುಚ್ಚರಿಸಿದ್ದಾರೆ.


