ದಾವಣಗೆರೆ: ಪತಿಯೊಂದಿಗೆ ಜಗಳವಾಡಿ ಬೇಸರದಿಂದ ತವರಿಗೆ ತೆರಳುತ್ತಿದ್ದ 41 ವರ್ಷದ ಮಹಿಳೆಯೊಬ್ಬರ ಮೇಲೆ ದುರುಳರ ಗುಂಪೊಂದು ಸಾಮೂಹಿಕ ಅತ್ಯಾಚಾರ ಎಸಗಿರುವ ಅತಿ ಮಾನುಷ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಚನ್ನಗಿರಿ ತಾಲೂಕಿನ ಬಸವಾಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜೂನ್ 3ರಂದು ಈ ಘೋರ ಕೃತ್ಯ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತೆ ಇಂದು ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿದ್ದಾರೆ.
'ಅಕ್ಕಾ' ಎಂದು ಕರೆದು ಮದ್ಯ ಕುಡಿಸಿದ ದುರುಳರು
ಪತಿ ಜೊತೆ ಜಗಳವಾಡಿದ್ದ ಮಹಿಳೆ ತವರಿಗೆ ಹೋಗಲು ರಸ್ತೆ ಬದಿಯಲ್ಲಿ ನಿಂತಿದ್ದರು. ಈ ವೇಳೆ ಹಂದಿ ಬೇಟೆಗೆಂದು ತೆರಳಿದ್ದ ಯುವಕರ ಗುಂಪೊಂದು ಒಂಟಿಯಾಗಿದ್ದ ಮಹಿಳೆಯನ್ನು ಗಮನಿಸಿದೆ.
ಮಹಿಳೆ ಸುಸ್ತಾಗಿರುವುದನ್ನು ಕಂಡು, "ಅಕ್ಕಾ, ತುಂಬಾ ಸುಸ್ತಾಗಿದ್ದೀಯಾ ಕೂಲ್ ಡ್ರಿಂಕ್ಸ್ ಕುಡಿ" ಎಂದು ನಂಬಿಸಿ, ಅದರಲ್ಲಿ ಮದ್ಯ ಬೆರೆಸಿ ಕುಡಿಸಿದ್ದಾರೆ.
ಮಹಿಳೆ ಪ್ರಜ್ಞೆ ತಪ್ಪುತ್ತಿದ್ದಂತೆ ಆಕೆಯನ್ನು ಸಮೀಪದ ತೋಟಕ್ಕೆ ಎಳೆದೊಯ್ದು, ರಾತ್ರಿಯಿಂದ ಮುಂಜಾನೆಯವರೆಗೆ ಯುವಕರ ಗುಂಪು ವಿಕೃತಿ ಮೆರೆದಿದೆ.
ಅಷ್ಟಕ್ಕೇ ನಿಲ್ಲದ ಕಾಮುಕರು, ಮಹಿಳೆಯ ಬೆತ್ತಲೆ ಫೋಟೋ ಹಾಗೂ ವೀಡಿಯೋಗಳನ್ನು ಚಿತ್ರೀಕರಿಸಿ ವಿಕೃತ ಸಂತೋಷ ಪಟ್ಟಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್!
ಆರೋಪಿಗಳು ತಾವು ಮಾಡಿದ ವೀಡಿಯೋ ಹಾಗೂ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು.
ಇತ್ತ ಗ್ರಾಮದಲ್ಲಿ ಘಟನೆಗೆ ಸಂಬಂಧಿಸಿದಂತೆ ಗುಸುಗುಸು ಚರ್ಚೆ ಆರಂಭವಾಗಿ, ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಹೆದರಿದ ಆರೋಪಿಗಳು ವೀಡಿಯೋಗಳನ್ನು ಡಿಲೀಟ್ ಮಾಡಿದ್ದಾರೆ. ತದನಂತರ ಧೈರ್ಯ ಮಾಡಿದ ಸಂತ್ರಸ್ತೆ ಬಸವಪಟ್ಟಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
10 ಆರೋಪಿಗಳ ಬಂಧನ
ಸಂತ್ರಸ್ತೆಯ ದೂರಿನನ್ವಯ ತಕ್ಷಣ ಕಾರ್ಯಪ್ರವೃತ್ತರಾದ ಬಸವಪಟ್ಟಣ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಯಲೋದಹಳ್ಳಿ ಮೂಲದ ಹತ್ತು ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ಇಸ್ತ್ರೀ ನಾಗರಾಜ್, ನಾಗರಾಜ್, ಅರ್ಜುನಾ, ಬಸವಂತ, ಕುಂದೂರು ಮಾರುತಿ, ಹೆಗ್ಗ ಮಾರುತಿ, ಮನು, ಜೋಗಿ ಸುನೀಲ್, ಪ್ರದೀಪ್ ಹಾಗೂ ಮಧು ಬಂಧಿತ ಆರೋಪಿಗಳಾಗಿದ್ದಾರೆ.


