ತುರುವೇಕೆರೆ : ತಾಲೂಕಿನದ್ಯಂತ ಜೂನ್ 28 ರಿಂದ ಜುಲೈ 01 ರವರೆಗೆ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, 5 ವರ್ಷದೊಳಗಿನ ಮಗು ಲಸಿಕೆಯಿಂದ ವಂಚಿತರಾಗದಂತೆ ಪೋಷಕರು ತಪ್ಪದೇ ತಮ್ಮ ಮಗುವಿಗೆ ಎರಡು ಹನಿ ಪೋಲಿಯೋ ಲಸಿಕೆ ಹಾಕಿಸಿ ಮಕ್ಕಳನ್ನು ಅಂಗವೈಕಲ್ಯದಿಂದ ದೂರ ಮಾಡುವಂತೆ ತಹಸೀಲ್ದಾರ್ ಕುಂಇ ಅಹಮದ್ ಮನವಿ ಮಾಡಿದರು.
ತಾಲೂಕು ಕಛೇರಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಜೂನ್ 28 ರಿಂದ ಜುಲೈ 01ರೊಳಗೆ ತಾಲ್ಲೂಕಿನಲ್ಲಿರುವ 5 ವರ್ಷದೊಳಗಿನ 9505 ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕುವ ಮೂಲಕ ಮಕ್ಕಳನ್ನು ಪೊಲೀಯೋ ಗುರಿಯನ್ನು ಹೊಂದಲಾಗಿದೆ. ಜೂನ್ 28 ರಂದು ಭಾನುವಾರ ಲಸಿಕೆ ಕಾರ್ಯಕ್ರಮಕ್ಕೆ ಶಾಸಕ ಎಂ.ಟಿ.ಕೃಷ್ಣಪ್ಪ ಚಾಲನೆ ನೀಡಲಿದ್ದು, ಅಂದಿನಿಂದ ತಾಲೂಕಿನಾದ್ಯಂತ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ, ಉಪಕೇಂದ್ರಗಳಲ್ಲಿ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ನಮ್ಮ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದು ಮಕ್ಕಳಿಗೆ ಲಸಿಕೆ ಹಾಕಲಿದ್ದಾರೆ. ಜೂನ್ 29 ಹಾಗೂ ಜೂನ್ 30 ರಂದು ಗ್ರಾಮೀಣ ಭಾಗದಲ್ಲಿ ಹಾಗೂ ಜೂನ್ 29 ರಿಂದ ಜುಲೈ 01 ರವರೆಗೆ ಮೂರು ದಿನಗಳ ಕಾಲ ಪಟ್ಟಣದಲ್ಲಿ ಮನೆಮನೆಗೆ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಭೇಟಿ ನೀಡಿ ಮಗುವಿಗೆ ಪೋಲಿಯೋ ಲಸಿಕೆ ಹಾಕಲಿದ್ದು, ನಾಗರೀಕರು ಸಹಕಾರ ನೀಡಬೇಕೆಂದರು.
ತಾಲ್ಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ರಂಗನಾಥ್ ಮಾತನಾಡಿ, ತುರುವೇಕೆರೆ ತಾಲ್ಲೂಕಿನಲ್ಲಿ 5 ವರ್ಷದೊಳಗಿನ 9505 ಮಕ್ಕಳಿದ್ದಾರೆಂದು ಗುರುತಿಸಲಾಗಿದ್ದು, ಎಲ್ಲಾ ಮಕ್ಕಳಿಗೂ ಜೂನ್ 28 ರಂದೇ ಲಸಿಕೆ ಹಾಕುವ ಗುರಿಯನ್ನು ಹೊಂದಲಾಗಿದೆ. ಆದರೂ ಸಹ ಯಾವುದೇ ಮಗು ಲಸಿಕೆಯಿಂದ ದೂರ ಉಳಿಯಬಾರದೆಂಬ ಆಲೋಚನೆಯಿಂದ ಜೂನ್ 29, 30, ಜುಲೈ 01 ರಂದು ಮನೆಮನೆಗೆ ತೆರಳಿ ಲಸಿಕೆ ಪಡೆಯದ ಮಗುವಿಗೆ ಲಸಿಕೆ ನೀಡಲಾಗುವುದು ಎಂದರು.
ತುರುವೇಕೆರೆ ಸಾರ್ವಜನಿಕ ಆಸ್ಪತ್ರೆ, 11 ಪ್ರಾಥಮಿಕ ಆರೋಗ್ಯ ಕೇಂದ್ರ, 39 ಉಪಕೇಂದ್ರ ಸೇರಿದಂತೆ ಅತಿ ಹೆಚ್ಚು ಜನ ಸೇರುವ ತುರುವೇಕೆರೆ ಬಸ್ ನಿಲ್ದಾಣ, ಅಮ್ಮಸಂದ್ರ, ಬಾಣಸಂದ್ರ ರೈಲ್ವೆ ನಿಲ್ದಾಣಗಳಲ್ಲಿ ನಮ್ಮ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದು 5 ವರ್ಷದೊಳಗಿನ ಮಗುವಿಗೆ ಲಸಿಕೆ ನೀಡಲಿದ್ದಾರೆ. ತಾಲೂಕಿನಾದ್ಯಂತ ಒಟ್ಟು 90 ಬೂತ್ ಗಳನ್ನು ರಚಿಸಿದ್ದು 183 ತಂಡಗಳು, 20 ಮಂದಿ ಮೇಲ್ವಿಚಾರಕರು, 366 ಸಿಬ್ಬಂದಿ ಈ ಲಸಿಕಾ ಕಾರ್ಯಕ್ರಮದಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ನಾಗರೀಕರು, ಪೋಷಕರು ತಮ್ಮ 5 ವರ್ಷದೊಳಗಿನ ಮಕ್ಕಳಿಗೆ ಎಷ್ಟೇ ಬಾರಿ ಪೋಲಿಯೋ ಲಸಿಕೆ ಹಾಕಿಸಿದ್ದರೂ ಜೂನ್ 28 ರಂದು ತಪ್ಪದೇ ಲಸಿಕೆ ಹಾಕಿಸಬೇಕೆಂದರು.
ಈ ಸಂದರ್ಭದಲ್ಲಿ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಿ ಎಂಬ ಪ್ರಚಾರ ಪೋಸ್ಟರ್ ಅನ್ನು ಬಿಡುಗಡೆಗೊಳಿಸಲಾಯಿತು. ಕಂದಾಯ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್


