ಬೆಂಗಳೂರು: ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿಂದುಳಿದ ವರ್ಗಗಳ ಸಮುದಾಯಕ್ಕೆ ಸೇರಿರುವ ಕಾರ್ಯನಿರತ ಪತ್ರಕರ್ತರನ್ನು ಪ್ರೋತ್ಸಾಹಿಸುವ ಸಲುವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಮಾಧ್ಯಮ ಮಾನ್ಯತೆ ಕಾರ್ಡ್ ಹೊಂದಿರುವ ಕಾರ್ಯನಿರತ ಪತ್ರಕರ್ತರಿಗೆ "2026-27ನೇ ಸಾಲಿಗೆ ಮೀಡಿಯಾ ಕಿಟ್ " ವಿತರಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಆಯುಕ್ತ ಎಂ.ಎನ್. ಅನುಚೇತ್ ತಿಳಿಸಿದ್ದಾರೆ.
ಇಲಾಖೆಯ ಹವ್ಯಾಸಿ ಮಾನ್ಯತೆ ಕಾರ್ಡ್ ಹೊಂದಿರುವ ಪತ್ರಕರ್ತರು ಹಾಗೂ ಈ ಹಿಂದೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಹಾಗೂ ಸರ್ಕಾರದ ವ್ಯಾಪ್ತಿಗೆ ಒಳಪಡುವ ಅಕಾಡೆಮಿ/ನಿಗಮ/ಮಂಡಳಿ/ಇತ್ಯಾದಿ ಸರ್ಕಾರಿ ಸಂಸ್ಥೆಗಳಿಂದ ಈಗಾಗಲೇ ಮೀಡಿಯಾ ಕಿಟ್ ಪಡೆದಿರುವ ಕಾರ್ಯನಿರತ ಪತ್ರಕರ್ತರು ಮತ್ತೇ ಈ ಸಾಲಿನ ಮೀಡಿಯಾ ಕಿಟ್ ಗೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.
2026-27ನೇ ಸಾಲಿಗೆ ಮಾನ್ಯತೆ ಕಾರ್ಡ್ ಪಡೆದ ಹಿಂದುಳಿದ ವರ್ಗಗಳ ಕಾರ್ಯನಿರತ ಪತ್ರಕರ್ತರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಬೆಂಗಳೂರಿನಲ್ಲಿನ ಮಾನ್ಯತೆ ಹೊಂದಿದ ಪತ್ರಕರ್ತರು ಕೇಂದ್ರ ಕಚೇರಿಯ ಸುದ್ದಿ ಮತ್ತು ಪತ್ರಿಕಾ ವಿಭಾಗದಿಂದ ಹಾಗೂ ಜಿಲ್ಲಾ ಪತ್ರಕರ್ತರು ಆಯಾ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಧಿಕಾರಿಗಳಿಂದ ಅರ್ಜಿ ನಮೂನೆಯನ್ನು ಪಡೆದುಕೊಳ್ಳುವುದು ಅಥವಾ ಇಲಾಖೆಯ ವೆಬ್ ಸೈಟ್ https://dipr.karnataka.gov.in ನ ಸುದ್ದಿ ಮತ್ತು ಪತ್ರಿಕಾ ಶಾಖೆಯ ವೆಬ್ ಸೈಟ್ ನಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು.
ದಿನಾಂಕ:10-09-2026 ರ ಸಂಜೆ 5 ಗಂಟೆಯೊಳಗೆ ಆಯಾ ಜಿಲ್ಲೆಗಳ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾಧಿಕಾರಿಗಳಿಗೆ ಸಲ್ಲಿಸಬೇಕು.
ಅರ್ಜಿಯಲ್ಲಿ ನಮೂದಿಸಲಾಗಿರುವ ಎಲ್ಲಾ ಮಾಹಿತಿಗಳಿಗೆ ಸೇವಾನುಭವಕ್ಕೆ ಅಧಿಕೃತ ಪೂರಕ ದಾಖಲೆಗಳ ದೃಢೀಕೃತ ಪ್ರತಿಗಳನ್ನು ಲಗತ್ತಿಸಿ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ದಿನಾಂಕದೊಳಗಾಗಿ ಸಲ್ಲಿಸಬೇಕು. ನಿಗದಿತ ದಿನಾಂಕದ ನಂತರ ಸಲ್ಲಿಸಲಾಗುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.


