ಹುಬ್ಬಳ್ಳಿ : ಉತ್ತರ ಕರ್ನಾಟಕದ ಆಧ್ಯಾತ್ಮಿಕ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲಾಗಲಿರುವ ರಾಯಾಪುರದ ಇಸ್ಕಾನ್‌ನಲ್ಲಿ ಶ್ರೀ ರಾಧಾ ಗೋವಿಂದ ದೇವಜಿ ಮಂದಿರವು ಬರುವ ಆಗಸ್ಟ್ ೧೦ರಿಂದ ಸಾರ್ವಜನಿಕ ದರ್ಶನಕ್ಕೆ ತೆರೆಯಲ್ಪಡಲಿದೆ.
ರಾಧಾ ಗೋವಿಂದ ದೇವರ ಪವಿತ್ರ ಪ್ರಾಣ ಪ್ರತಿಷ್ಠಾ ಮಹೋತ್ಸವವು ಜೂನ್ ೨೨ರಂದು ನೆರವೇರಲಿದ್ದು, ದಿ. ೧೮ರಿಂದ ಆಗಮ ಶಾಸ್ತ್ರ ಮತ್ತು ಪ್ರಾಚೀನ ದೇವಾಲಯ ಸಂಪ್ರದಾಯಗಳ ಅನುಸಾರ ವಿವಿಧ ವೇದಿಕ ಮತ್ತು ಆಗಮ ವಿಧಿವಿಧಾನಗಳು ನಡೆಯಲಿವೆ.ಪ್ರತಿಷ್ಠಾಪನೆಯ ನಂತರ, ಆಗಮ ಶಾಸ್ತ್ರದ ನಿರ್ದೇಶನದಂತೆ ೨೦೨೬ರ ಜೂನ್ ೨೩ರಿಂದ ಆಗಸ್ಟ್ ೯ರವರೆಗೆ ೪೮ ದಿನಗಳ ಮಂಡಲ ಪೂಜೆ ನಡೆಯಲಿದೆ.ಮಂಡಲ ಪೂಜೆ ಪೂರ್ಣಗೊಂಡ ನಂತರ, ಶ್ರೀ ಕೃಷ್ಣ-ಬಲರಾಮರ ವಿಗ್ರಹಗಳನ್ನು ವಿಧಿವತ್ತಾಗಿ ಹೊಸ ದೇವಾಲಯದ ಗರ್ಭಗುಡಿಗೆ ಪ್ರತಿಷ್ಠಾಪಿಸಲಾಗುವುದು. ಈ ಅವಧಿಯಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶವಿಲ್ಲವಾಗಿದ್ದು, ಆಗಸ್ಟ ೧೦ರಿಂದ ತೆರೆಯಲ್ಪಡಲಿದೆ.
ಇಸ್ಕಾನ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿವರಗಳನ್ನುಇಸ್ಕಾನ್ ಹು.ಧಾ.ಅಧ್ಯಕ್ಷ ರಾಜೀವ ಲೋಚನದಾಸ ನೀಡಿದರಲ್ಲದೇ ಪ್ರಸ್ತುತ ದೇವಾಲಯವು ಹುಬ್ಬಳ್ಳಿ–ಧಾರವಾಡ ರಸ್ತೆಯ ಮಟ್ಟದಿಂದ ಸುಮಾರು ೧೧೦ ಅಡಿ ಎತ್ತರದಲ್ಲಿದ್ದು, ಭವ್ಯವಾದ ೯೦ ಅಡಿ ಎತ್ತರದ ಗೋಪುರದ ನಿರ್ಮಾಣ ಪೂರ್ಣಗೊಂಡ ಬಳಿಕ, ದೇವಾಲಯದ ಒಟ್ಟು ಎತ್ತರವು ರಸ್ತೆ ಮಟ್ಟದಿಂದ ಸುಮಾರು ೨೦೦ ಅಡಿಗಳಾಗಲಿದ್ದು, ಇದು ಉತ್ತರ ಕರ್ನಾಟಕದ ಪ್ರಮುಖ ಆಧ್ಯಾತ್ಮಿಕ ಹೆಗ್ಗುರುತುಗಳಲ್ಲಿ ಒಂದಾಗಲಿದೆ.
ಮುಖ್ಯ ದೇವಾಲಯವು ನಾಲ್ಕು ಮಹಡಿಗಳು ಮತ್ತು ಒಂದು ಮೇಲ್ಛಾವಣಿಯನ್ನು ಒಳಗೊಂಡಿದ್ದು, ಪ್ರಧಾನ ದೇವಾಲಯ ಸಭಾಂಗಣವು ಎರಡನೇ ಮಹಡಿಯಲ್ಲಿ ಸ್ಥಾಪಿತವಾಗಿದೆ. ಉತ್ತರ ಭಾರತದ ನಾಗರ ಶೈಲಿ ಮತ್ತು ದಕ್ಷಿಣ ಭಾರತದ ದ್ರಾವಿಡ ಶೈಲಿಗಳ ಸುಂದರ ಸಮನ್ವಯವಾದ ವೇಶರ ವಾಸ್ತುಶಿಲ್ಪ ಶೈಲಿಯಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ.
ಮೊದಲ ಹಂತದಲ್ಲಿ ಸುಮಾರು ೩೦ ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಈ ಯೋಜನೆಯು ಕರ್ನಾಟಕ ಹಾಗೂ ಅದರಾಚೆಯ ಪ್ರದೇಶಗಳಿಗೆ ಮಹತ್ವದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರವಾಗಿ ರೂಪುಗೊಳ್ಳುವ ದೃಷ್ಟಿಯಿಂದ ಪರಿಕಲ್ಪಿಸಲಾಗಿದೆ.
ಎರಡನೇ ಹಂತ ಪೂರ್ಣಗೊಂಡ ಬಳಿಕ, ದೇವಾಲಯ ಸಂಕೀರ್ಣವು ಸುಮಾರು ೨ ಲಕ್ಷ ಚದರ ಅಡಿ ವಿಸ್ತೀರ್ಣಕ್ಕೆ ವಿಸ್ತರಿಸಲಿದ್ದು, ಪ್ರಸಿದ್ಧ ಇಸ್ಕಾನ್ ಬೆಂಗಳೂರು ದೇವಾಲಯ ಸಂಕೀರ್ಣಕ್ಕೆ ಸಮಾನವಾದ ಭವ್ಯತೆಯನ್ನು ಹೊಂದಲಿದೆ.
ಈ ಮಂದಿರದ ಶಿಲಾನ್ಯಾಸ ಸಮಾರಂಭವು ೨೦೧೩ರ ಫೆಬ್ರವರಿ ೨೪ರಂದು ನೆರವೇರಿದ್ದು, ೨೦೧೩ರ ಜುಲೈ ೧೧ರಂದು ಅಡಿಪಾಯ ಕಾಮಗಾರಿ ಆರಂಭಗೊAಡಿತ್ತು. ದೇವಾಲಯ ನಿರ್ಮಾಣಕ್ಕೆ ಆನಂದ ಕಲಾಲ್, ಡಾ. ಚಿಗರುಪಾಟಿ ವಿ. ಎಸ್. ವಿ. ಪ್ರಸಾದ್, ಜಿತೇಂದ್ರ ಮಜೇತಿಯಾ, ಗುರುರಾಜ ದೇಶಪಾಂಡೆ ಹಾಗೂ ಮೋಹನದಾಸ್ ಪೈ ಮುಂತಾದವರು ವಿಶೇಷ ನೆರವು ನೀಡಿದ್ದಾರೆಂದರು.
ಇಸ್ಕಾನ್ ಹುಬ್ಬಳ್ಳಿ–ಧಾರವಾಡ ಉಪಾಧ್ಯಕ್ಷರಾದ ರಘೋತ್ತಮದಾಸ ಹಾಗೂ ಇತರರು ಇದ್ದರು.
ವರದಿ : ಸುಧೀರ್ ಕುಲಕರ್ಣಿ


