ಬೆಂಗಳೂರು: ಇಂಧನ ಉಳಿತಾಯಕ್ಕೆ ಕರೆ ನೀಡಿರುವ ಪ್ರಧಾನಿ ನರೇಂದ್ರ ಮೋದಿಯವರ ಸಲಹೆಯನ್ನು ಪಾಲಿಸಲು ಮುಂದಾಗಿರುವ ವಿಪಕ್ಷ ನಾಯಕ ಆರ್.ಅಶೋಕ್, ಇನ್ಮುಂದೆ ಮೆಟ್ರೋದಲ್ಲಿ ಪ್ರಯಾಣಿಸುವುದಾಗಿ ತಿಳಿಸಿದ್ದಾರೆ.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಆರ್. ಅಶೋಕ್, ಪ್ರಧಾನಿ ಮೋದಿಯವರ ಕರೆಗೆ ನಾವು ಸಂಪೂರ್ಣ ಬೆಂಬಲ ನೀಡುತ್ತೇವೆ.
ನನ್ನ ಬೆಂಗಾವಲು ವಾಹನಗಳ ಬಳಕೆಯನ್ನು ಶೇ. 30 ರಿಂದ 40ರಷ್ಟು ಕಡಿತಗೊಳಿಸಲು ನಿರ್ಧರಿಸಿದ್ದೇನೆ. ಮದುವೆಗಳಂತಹ ಸಮಾರಂಭಗಳಿಗೆ ಹೋದಾಗ ಎಲ್ಲಾ ವಾಹನಗಳನ್ನು ಬಳಸುವುದಿಲ್ಲ. ಅಷ್ಟೇ ಅಲ್ಲದೆ, ವಾರದಲ್ಲಿ ಒಂದೆರಡು ದಿನ ಮೆಟ್ರೋದಲ್ಲಿ ಸಂಚಿರಿಸುವುದಾಗಿ ತಿಳಿಸಿದ್ದಾರೆ.
ನಾನು ಸಾರಿಗೆ ಸಚಿವರಾಗಿದ್ದ ಕಾಲದಲ್ಲಿ ಬಸ್ ಡೇ ಯೋಜನೆಯನ್ನು ಜಾರಿಗೆ ತಂದಿದ್ದೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಕೂಡ ಈ ಮಾದರಿಯನ್ನು ಅನುಸರಿಸಬೇಕು ಎಂದು ಹೇಳಿದರು.
ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ವಾರಕ್ಕೊಮ್ಮೆ ಕಡ್ಡಾಯವಾಗಿ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವಂತೆ ನಿಯಮ ರೂಪಿಸಲು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯುವುದಾಗಿ ಅವರು ತಿಳಿಸಿದ್ದಾರೆ.
ಯುದ್ಧ ನಿಲ್ಲುವ ಲಕ್ಷಣಗಳಿಲ್ಲ. ಇಂತಹ ಸಂಕಷ್ಟದ ಸಮಯದಲ್ಲಿ ಕಾಂಗ್ರೆಸ್ ಚಿಲ್ಲರೆ ರಾಜಕೀಯ ಬಿಟ್ಟು ದೇಶದ ಹಿತದೃಷ್ಟಿಯಿಂದ ಮಿತವ್ಯಯಕ್ಕೆ ಸಹಕರಿಸಬೇಕು ಎಂದರು.
ಯುದ್ಧದ ಪರಿಣಾಮವಾಗಿ ಹೊರ್ಮುಜ್ ಜಲಸಂಧಿ ಮುಚ್ಚಿರುವುದು ಜಾಗತಿಕ ಹಡಗು ಸಂಚಾರದ ಮೇಲೆ ತೀವ್ರ ಪರಿಣಾಮ ಬೀರಿದೆ.
ಇದರಿಂದಾಗಿ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಕೊರತೆ ಎದುರಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪ್ರಧಾನಿಯವರ ಸೂಚನೆಯನ್ನು ಸಾಂಕೇತಿಕವಾಗಿ ಅಲ್ಲ ಸಮಸ್ಯೆ ಬಗೆಹರಿಯುವವರೆಗೂ ಪಾಲಿಸುತ್ತೇವೆ ಎಂದು ಹೇಳಿದರು.


