ತಿರುವನಂತಪುರಂ: ಕೇರಳ ರಾಜಕಾರಣದಲ್ಲಿ ಇಂದು ಭಾರಿ ತಲ್ಲಣ ಮೂಡಿಸುವಂತಹ ಬಿಗ್ ಡೆವಲಪ್ಮೆಂಟ್ ಒಂದಾಗಿದೆ.
ಕೊಚ್ಚಿನ್ ಮಿನರಲ್ಸ್ ಆಂಡ್ ರುಟೈಲ್ ಲಿಮಿಟೆಡ್ (CMRL) ಕಂಪನಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ (Money Laundering Case) ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಬುಧವಾರ ಬೆಳ್ಳಂಬೆಳಗ್ಗೆ ರಾಜ್ಯದಾದ್ಯಂತ ಭಾರಿ ಬೇಟೆ ಆರಂಭಿಸಿದ್ದಾರೆ.
ಕೇರಳದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ನಾಯಕ ಪಿಣರಾಯಿ ವಿಜಯನ್ ಅವರ ನಿವಾಸಗಳು ಸೇರಿದಂತೆ ಒಟ್ಟು 10 ಪ್ರಮುಖ ಸ್ಥಳಗಳಲ್ಲಿ ಇಡಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿ ಶೋಧ ಕಾರ್ಯ ಕೈಗೊಂಡಿದ್ದಾರೆ.
ರಾಜ್ಯ ರಾಜಧಾನಿ ತಿರುವನಂತಪುರಂನ ಬೇಕರಿ ಜಂಕ್ಷನ್ ಬಳಿ ಇರುವ ಪಿಣರಾಯಿ ವಿಜಯನ್ ಅವರ ಬಾಡಿಗೆ ಮನೆ ಹಾಗೂ ಕಣ್ಣೂರಿನಲ್ಲಿರುವ ಅವರ ಕುಟುಂಬದ ನಿವಾಸಗಳ ಮೇಲೆ ಇಡಿ ತಂಡಗಳು ತಪಾಸಣೆ ನಡೆಸುತ್ತಿವೆ.
ಒಟ್ಟು 10 ಆವರಣಗಳಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಈ ರೇಡ್ ಮುಂದುವರಿದಿದೆ. ಪಿಣರಾಯಿ ವಿಜಯನ್ ಅವರ ಪುತ್ರಿ ಟಿ. ವೀಣಾ ಅವರ ಐಟಿ ಸಂಸ್ಥೆಯ ವ್ಯವಹಾರಗಳಿಗೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


