ತುರುವೇಕೆರೆ : ತಾಲೂಕಿನ ದಂಡಿನಶಿವರ ಹೋಬಳಿ ಸಾರಿಗೆಹಳ್ಳಿ ಕೆರೆ ಕೋಡಿ ಸೇತುವೆ, ಲೈನಿಂಗ್ ಕಾಮಗಾರಿಯನ್ನು ಮುಂದಿನ ಹದಿನೈದು ದಿನದೊಳಗೆ ಪ್ರಾರಂಭಿಸದಿದ್ದರೆ ಹೇಮಾವತಿ ಕಛೇರಿ ಎದುರು ಸಹಸ್ರಾರು ರೈತರೊಂದಿಗೆ ಉಪವಾಸ ಸತ್ಯಾಗ್ರಹ, ಪ್ರತಿಭಟನೆ ನಡೆಸಲಾಗುವುದು ಎಂದು ನಿಕಟಪೂರ್ವ ಶಾಸಕ ಮಸಾಲಾ ಜಯರಾಮ್ ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಸಾರಿಗೆಹಳ್ಳಿ ಕೆರೆ ಕೋಡಿ ಸೇತುವೆ, ಲೈನಿಂಗ್ ಕಾಮಗಾರಿಗೆ ಈಗಾಗಲೇ 3 ಕೋಟಿ 68 ಲಕ್ಷ ರೂ ಸರ್ಕಾರದಿಂದ ಬಿಡುಗಡೆಯಾಗಿದೆ. ಅನುದಾನ ಬಿಡುಗಡೆ ನಂತರ ಶಾಸಕ ಎಂ.ಟಿ.ಕೃಷ್ಣಪ್ಪನವರು ಕಾಮಗಾರಿಗೆ ಚಾಲನೆಯನ್ನೂ ಸಹ ನೀಡಿ ಕಾಮಗಾರಿಯೂ ಪ್ರಾರಂಭವಾಗಿತ್ತು. ಆ ಭಾಗದ ಸಹಸ್ರಾರು ರೈತರಿಗೆ ಈ ಕಾಮಗಾರಿಯಿಂದ ಅನುಕೂಲವಾಗಲಿರುವ ಕಾರಣ ನಾನೂ ಸಹ ಇಂಜಿನಿಯರ್ ಹಾಗೂ ಗುತ್ತಿಗೆದಾರರಿಗೆ ಒತ್ತಡ ಹಾಕಿದ್ದೆ. ಕಾಮಗಾರಿಯನ್ನು ಗುಣಮಟ್ಟದಿಂದ ನಿರ್ವಹಿಸಬೇಕು ಹಾಗೂ ಮಳೆ ಬಂದರೆ ಜನರು ಓಡಾಡಲು ಕಷ್ಟವಾಗುವ ಕಾರಣ ಶೀಘ್ರ ಕೆಲಸ ಮುಗಿಸುವಂತೆ ಸೂಚನೆಯನ್ನು ನೀಡಿದ್ದೆ. ಆದರೆ ಕಳೆದ 15 ದಿನದಲ್ಲಿ ಸ್ಥಳಕ್ಕೆ ಹೋಗಿ ನೋಡಿದರೆ ಕಾಮಗಾರಿಗೆ ತಂದಿದ್ದ ಎಲ್ಲಾ ಸಾಮಗ್ರಿಗಳು, ಸಲಕರಣೆಗಳನ್ನು ಗುತ್ತಿಗೆದಾರರು ತೆಗೆದುಕೊಂಡು ಹೋಗಿದ್ದು ಕಾಮಗಾರಿ ಸ್ಥಗಿತಗೊಳಿಸಿದ್ದಾರೆ ಎಂದು ಕಿಡಿಕಾರಿದರು.
ಸರ್ಕಾರದಿಂದ ಹಣ ಬಿಡುಗಡೆಯಾಗಿದೆ, ಶಾಸಕರು ಪೂಜೆ ನೆರವೇರಿಸಿದ್ದಾರೆ, ಕಾಮಗಾರಿ ಪ್ರಾರಂಭಿಸಿ ದಿಢೀರ್ ಕಾಮಗಾರಿ ಸ್ಥಗಿತಗೊಳಿಸಲು ಕಾರಣವೇನೆಂಬುದನ್ನು ತಿಳಿಸಬೇಕು. ಸರ್ಕಾರದಿಂದ ಅನುದಾನ ತರುವುದು ಬಹಳ ಕಷ್ಟದ ಕೆಲಸ, ಅಂತಹುದರಲ್ಲಿ ಕಷ್ಟಪಟ್ಟು ತಂದ ಅನುದಾನ ಜನರಿಗೆ ಅನುಕೂಲವಾಗಬೇಕು. ಕಾಮಗಾರಿ ಪ್ರಾರಂಭಿಸಿ ಈಗ ಸಾಮಗ್ರಿ, ಸಲಕರಣೆ ತೆಗೆದುಕೊಂಡು ಹೋಗಿರುವುದು ಅಕ್ಷಮ್ಯ. ಮಳೆ ಬಂದರೆ ಆ ರಸ್ತೆಯಲ್ಲಿ ವಾಹನ ಸಂಚರಿಸುವುದು, ನಾಗರೀಕರು ಓಡಾಡುವುದು ಬಹಳ ಕಷ್ಟವಾಗುತ್ತದೆ. ಕೂಡಲೇ ಹೇಮಾವತಿ ಇಲಾಖಾ ಅಧಿಕಾರಿಗಳು, ಇಂಜಿನಿಯರ್ ಹಾಗೂ ಗುತ್ತಿಗೆದಾರರು ಕೂಡಲೇ ಮುಂದಿನ ಹದಿನೈದು ದಿನದೊಳಗೆ ಕಾಮಗಾರಿ ಪ್ರಾರಂಭಿಸದಿದ್ದರೆ ಹೇಮಾವತಿ ಕಛೇರಿ ಎದುರು ಆ ಭಾಗದ ಕೆರೆ ಅಚ್ಚುಕಟ್ಟು ಪ್ರದೇಶದ ಸಹಸ್ರಾರು ರೈತರೊಂದಿಗೆ ಉಪವಾಸ ಸತ್ಯಾಗ್ರಹ, ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಕೊಂಡಜ್ಜಿ ವಿಶ್ವನಾಥ್, ಸಾರಿಗೆಹಳ್ಳಿ ಅಚ್ಚುಕಟ್ಟು ಪ್ರದೇಶದ ರೈತರಾದ ಗೌರೀಶ್, ಭರತ್, ಜಗದೀಶ್, ಪ್ರಸನ್ನಕುಮಾರ್, ಜಯಣ್ಣ, ಅನಿತಾನಂಜುAಡಯ್ಯ, ರಕ್ಷಿತ್, ಅನಿಲ್, ಲಿಖಿತ್, ವಿದ್ಯಾನಂದ್, ಇಂದ್ರಕುಮಾರ್, ವಿಜಯಕುಮಾರ್ ಮುಂತಾದವರಿದ್ದರು.
ವರದಿ : ಗಿರೀಶ್ ಕೆ ಭಟ್

