ತುರುವೇಕೆರೆ : ಮಸಾಲೆ ಪದಾರ್ಥ ಮಾರುವ ವ್ಯಕ್ತಿಯೋರ್ವ ಇಂದು ರಾಜಕೀಯ ಕ್ಷೇತ್ರದಲ್ಲಿ ಬೆಳೆಯುವುದಕ್ಕೆ, ಶಾಸಕನಾಗಿ ಲಕ್ಷಾಂತರ ಜನರ ಅಭಿಮಾನ ಗಳಿಸಲು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಕಾರಣರಾಗಿದ್ದಾರೆ. ನನ್ನ ಉಸಿರು ಇರುವವರೆಗೂ ಯಡಿಯೂರಪ್ಪನವರ ಋಣ ಮರೆಯುವುದಿಲ್ಲ ಎಂದು ನಿಕಟಪೂರ್ವ ಶಾಸಕ ಮಸಾಲಾ ಜಯರಾಮ್ ತಿಳಿಸಿದರು.
ತಾಲೂಕಿನ ಚಿಕ್ಕೋನಹಳ್ಳಿ ಗೇಟ್ ನಲ್ಲಿರುವ ತಮ್ಮ ಫಾರಂ ಹೌಸಿನಲ್ಲಿ ನಡೆದ ಬಿ.ಎಸ್.ವೈ. ಅಭಿಮಾನೋತ್ಸವದ ಪೂರ್ವಭಾವಿ ಸಭೆಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, 2013 ರಲ್ಲಿ ಯಡಿಯೂರಪ್ಪನವರು ಕರ್ನಾಟಕ ಜನತಾ ಪಕ್ಷ ಕಟ್ಟಿದಾಗ ನಾನು ಟಿಕೆಟ್ ಕೇಳಿರಲಿಲ್ಲ. ಆದರೆ ಯಡಿಯೂರಪ್ಪನವರೇ ನನ್ನನ್ನು ಗುರುತಿಸಿ ಕರೆದು ಟಿಕೆಟ್ ನೀಡಿ ನನ್ನ ರಾಜಕೀಯ ಭವಿಷ್ಯ ಬರೆದರು. ಅಂದು ಅವರ ಆರ್ಶೀವಾದ, ತಾಲೂಕಿನ ಜನರ ಅಭಿಮಾನದಿಂದ 58 ಸಾವಿರಕ್ಕೂ ಅಧಿಕ ಮತ ಪಡೆದು ಅಲ್ಪಮತದಿಂದ ಪರಾಭವಗೊಂಡಿದ್ದೆ. ತದನಂತರದಲ್ಲಿ ಮತ್ತೆ ಬಿಜೆಪಿಯಿಂದ ಟಿಕೆಟ್ ನೀಡಿ ನನ್ನನ್ನು ಶಾಸಕನನ್ನಾಗಿಸಿ ಸಾವಿರಾರು ಕೋಟಿ ರೂಗಳ ಅನುದಾನವನ್ನು ನೀಡಿ ತುರುವೇಕೆರೆ ಕ್ಷೇತ್ರದ ಅಭಿವೃದ್ದಿಗೆ ಸಹಕಾರ ನೀಡಿದರು. ನನ್ನ ರಾಜಕೀಯ ಬೆಳವಣಿಗೆ, ಕ್ಷೇತ್ರದ ಅಭಿವೃದ್ದಿ ಯಡಿಯೂರಪ್ಪನವರ ಋಣದಿಂದ ಸಾಧ್ಯವಾಗಿದ್ದು, ನನ್ನ ಕೊನೆ ಉಸಿರು ಇರುವವರೆಗೂ ಯಡಿಯೂರಪ್ಪನವರನ್ನು ಮರೆಯುವುದಿಲ್ಲ ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸಾರ್ವಜನಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಬಂದು 50 ವರ್ಷಗಳಾಗಿರುವ ಹಿನ್ನೆಲೆಯಲ್ಲಿ ಅವರ ಸಾಧನೆಯನ್ನು ಗೌರವಿಸಲು ಭಾರತೀಯ ಜನತಾ ಪಕ್ಷ ಹಾಗೂ ಬಿ.ಎಸ್.ವೈ ಅಭಿಮಾನಿಗಳಿಂದ ಮೇ 09 ರಂದು ಚಿತ್ರದುರ್ಗದಲ್ಲಿ ಬಿ.ಎಸ್.ವೈ. ಅಭಿಮಾನೋತ್ಸವ ಹಮ್ಮಿಕೊಂಡಿದ್ದು, ಕೇಂದ್ರ ಗೃಹಸಚಿವ ಅಮಿತ್ ಶಾ ಆಗಮಿಸಲಿದ್ದಾರೆ. ತಾಲ್ಲೂಕಿನ ಪ್ರತಿ ಹಳ್ಳಿಗೂ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು. ತಾಲೂಕಿನಿಂದ 10 ಸಾವಿರ ಜನರು ಸಮಾರಂಭಕ್ಕೆ ಬರಲಿದ್ದೇವೆಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ತಿಳಿಸಿದ್ದೇನೆ. ಅದರಂತೆ ಬಿಜೆಪಿ ಕಾರ್ಯಕರ್ತರು, ಬಿ.ಎಸ್.ವೈ. ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು, ಬಿಜೆಪಿ ಸಂಘಟನೆ ಎಷ್ಟು ಬಲಿಷ್ಠವಾಗಿದೆ ಎಂಬುದನ್ನು ಯಡಿಯೂರಪ್ಪನವರಿಗೆ ತೋರಿಸಬೇಕೆಂದರು.
ವರದಿ : ಗಿರೀಶ್ ಕೆ ಭಟ್
ಈ ಸಂದರ್ಭದಲ್ಲಿ ಜಿಲ್ಲಾ ಪ್ರಭಾರಿ ಬಸವರಾಜ್, ಜಿಲ್ಲಾ ಕಾರ್ಯದರ್ಶಿ ಮೃತ್ಯುಂಜಯ, ಪಕ್ಷದ ತಾಲೂಕು ಅಧ್ಯಕ್ಷ ಪ್ರಕಾಶ್ ಯಾದವ್, ಉಪಾಧ್ಯಕ್ಷರಾದ ಸಂತೋಷ್ ಕಂಟ್ಲಿ, ಹರಿಕಾರನಹಳ್ಳಿ ಪ್ರಸಾದ್, ಸಿದ್ದಪ್ಪಾಜಿ, ಮಂಜಣ್ಣ, ನವೀನ್ ಬಾಬು, ಪ್ರಧಾನ ಕಾರ್ಯದರ್ಶಿ ಮಹೇಶ್, ಯೋಗಾನಂದ್, ಯುವ ಮೋರ್ಚಾ ಅಧ್ಯಕ್ಷ ತೀರ್ಥಕುಮಾರ್, ಮುಖಂಡರಾದ ಕೊಂಡಜ್ಜಿ ವಿಶ್ವನಾಥ್, ಉಗ್ರಯ್ಯ, ವಿ.ಬಿ.ಸುರೇಶ್, ಅನಿತಾನಂಜುಂಡಯ್ಯ, ಪದ್ಮಾವತಿ, ಆಶಾರಾಜಶೇಖರ್, ರಾಧಾ, ಗೌರೀಶ್, ಭರತ್ ಸೇರಿದಂತೆ ನೂರಾರು ಮಂದಿ ಕಾರ್ಯಕರ್ತರು ಉಪಸ್ಥಿತರಿದ್ದರು.

