ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರು ಆಡಿದ 'ದಿಮಾಗಿ ನಕ್ಸಲ್' ಎಂಬ ಪದ ಇದೀಗ ದೇಶದ ರಾಜಕೀಯ ರಂಗದಲ್ಲಿ ದೊಡ್ಡ ಸಮರಕ್ಕೇ ದಾರಿ ಮಾಡಿಕೊಟ್ಟಿದೆ.
ಕೇಂದ್ರ ಸರ್ಕಾರವನ್ನು ಹಾಗೂ ಬಿಜೆಪಿ ಆಡಳಿತವನ್ನು ಪ್ರಶ್ನಿಸಿ, ದೇಶದಲ್ಲಿ ಉತ್ತಮ ಸೌಲಭ್ಯಗಳನ್ನು ಬೇಡುವ ಪ್ರತಿಯೊಬ್ಬರನ್ನೂ ಪ್ರಧಾನಿ ನಕ್ಸಲರಂತೆ ನೋಡುತ್ತಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿಯ (AAP) ಸಂಸ್ಥಾಪಕ ಅರವಿಂದ್ ಕೇಜ್ರಿವಾಲ್ (Arvind Kejriwal) ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ವೀಡಿಯೊ ಹಂಚಿಕೊಂಡಿರುವ ದೆಹಲಿಯ ಮಾಜಿ ಮುಖ್ಯಮಂತ್ರಿ ಕೇಜ್ರಿವಾಲ್, "ಒಂದು ವೇಳೆ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಮತ್ತು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಇಂದಿನ ಕಾಲದಲ್ಲಿದ್ದಿದ್ದರೆ, ಪ್ರಧಾನಿ ಮೋದಿಯವರು ಅವರಿಗೂ 'ದಿಮಾಗಿ ನಕ್ಸಲ್' ಎಂಬ ಪಟ್ಟ ಕಟ್ಟುತ್ತಿದ್ದರು.
ದೇಶದ ಅಭಿವೃದ್ಧಿಗಾಗಿ ಮತ್ತು ಸಾರ್ವಜನಿಕ ಹಿತಕ್ಕಾಗಿ ಧ್ವನಿ ಎತ್ತುವ ನಿಜವಾದ ದೇಶಪ್ರೇಮಿಗಳನ್ನು ಸರ್ಕಾರ ನಕ್ಸಲರಂತೆ ಬಿಂಬಿಸುತ್ತಿದೆ. ದೇಶದ ಸೇವೆ ಮಾಡುವ ನಾನೂ ಕೂಡ ಒಬ್ಬ 'ದಿಮಾಗಿ ನಕ್ಸಲ್', ಹಾಗೆ ಕರೆಸಿಕೊಳ್ಳಲು ನನಗೆ ಹೆಮ್ಮೆ ಎನಿಸುತ್ತದೆ" ಎಂದು ಖಾರವಾಗಿ ಉತ್ತರಿಸಿದ್ದಾರೆ.
ಪ್ರಧಾನಿಯವರ ನಿಲುವನ್ನು ಕಟುವಾಗಿ ವಿಮರ್ಶಿಸಿದ ಕೇಜ್ರಿವಾಲ್, "ಸರ್ಕಾರಿ ಶಾಲೆಗಳ ಶಿಕ್ಷಣ ಮಟ್ಟ ಸುಧಾರಿಸಬೇಕು, ಉತ್ತಮ ಗುಣಮಟ್ಟದ ಆಸ್ಪತ್ರೆಗಳು ಮತ್ತು ಉತ್ತಮ ರಸ್ತೆಗಳು ಬೇಕು ಎಂದು ಬಯಸುವುದು ಪ್ರಧಾನಿಗಳ ಪ್ರಕಾರ ನಕ್ಸಲಿಸಂ ಆಗಿ ಕಾಣಿಸುತ್ತಿದೆ. ಬಿಜೆಪಿಯ ಬೆದರಿಕೆಗಳಿಗೆ ಜಗ್ಗದೆ ನಿಜವಾದ 'ವಿಕಸಿತ ಭಾರತ' ಕಟ್ಟಲು ಶ್ರಮಿಸುವ ನಾಗರಿಕರನ್ನು ಈ ರೀತಿ ಜರಿಯಲಾಗುತ್ತಿದೆ" ಎಂದು ಕಿಡಿಕಾರಿದರು.


