ಹಾವೇರಿ: ಪರಪುರುಷನ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಶಂಕೆಯ ಹಿನ್ನೆಲೆಯಲ್ಲಿ, ಸ್ವಂತ ತಮ್ಮನೇ ಅಕ್ಕನನ್ನು ಅಂಗನವಾಡಿ ಕೇಂದ್ರದೊಳಗೇ ಮಚ್ಚಿನಿಂದ ಕತ್ತು ಸೀಳಿ ಭೀಕರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದಲ್ಲಿ ನಡೆದಿದೆ.ಈ ಘಟನೆಯಿಂದಾಗಿ ಸ್ಥಳೀಯವಾಗಿ ತೀವ್ರ ಆತಂಕ ಹಾಗೂ ಸಾರ್ವಜನಿಕರಲ್ಲಿ ನಡುಕ ಉಂಟಾಗಿದೆ.
ಅಂಗನವಾಡಿ ಆಯಾ ಕೊಲೆಯಾದ ದುರ್ದೈವಿ: ಶಿಗ್ಗಾವಿ ಪಟ್ಟಣದ ಮೌಲಾಲಿ ಗುಡ್ಡದ ನಿವಾಸಿಯಾದ ಸುಮಾ ಶಿವಶಂಕರ್ ವನಹಳ್ಳಿ (29) ಕೊಲೆಯಾದ ದುರ್ದೈವಿ ಮಹಿಳೆಯಾಗಿದ್ದಾರೆ.
ಇವರು ಇದೇ ಮೌಲಾಲಿ ಗುಡ್ಡ ಪ್ರದೇಶದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಆಯಾ (ಸಹಾಯಕಿ) ಕೆಲಸ ಮಾಡಿಕೊಂಡಿದ್ದರು. ಪ್ರತಿದಿನದಂತೆ ಇಂದು ಬೆಳಗ್ಗೆ ಕೂಡ ಅವರು ಅಂಗನವಾಡಿಯಲ್ಲಿ ಕರ್ತವ್ಯದಲ್ಲಿದ್ದಾಗ ಈ ಕ್ರೂರ ಕೃತ್ಯ ಜರುಗಿದೆ.
ಬೆಳಗ್ಗೆ ಸುಮಾರು 10:15ರ ಸುಮಾರಿಗೆ ಸುಮಾ ಅವರ ಸ್ವಂತ ತಮ್ಮ ಸಂಜು ಎಂಬಾತ ಮಚ್ಚು ಹಿಡಿದುಕೊಂಡು ಅಂಗನವಾಡಿ ಕೇಂದ್ರಕ್ಕೆ ನುಗ್ಗಿದ್ದಾನೆ.
ಅಕ್ಕನ ಮೇಲೆ ತೀವ್ರ ಆಕ್ರೋಶಗೊಂಡಿದ್ದ ಆತ ಏಕಾಏಕಿ ಮಚ್ಚಿನಿಂದ ಕುತ್ತಿಗೆ ಹಾಗೂ ಕೈಗಳಿಗೆ ಭೀಕರವಾಗಿ ಹಲ್ಲೆ ನಡೆಸಿದ್ದಾನೆ.
ಮಚ್ಚು ಬೀಸಿದ ರಭಸಕ್ಕೆ ಸುಮಾ ಅವರ ಕೈ ಕಟ್ ಆಗಿದ್ದು, ಕುತ್ತಿಗೆಗೆ ಗಂಭೀರ ಗಾಯಗಳಾದ ಹಿನ್ನೆಲೆಯಲ್ಲಿ ಅವರು ರಕ್ತದ ಮಡುವಿನಲ್ಲಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.


