ಬೆಂಗಳೂರು: ರಾಜ್ಯ ಸಚಿವ ಸಂಪುಟ ಸಭೆಯ ಬೆನ್ನಲ್ಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಾರ್ವಜನಿಕರ ಹಿತದೃಷ್ಟಿಯಿಂದ ಐತಿಹಾಸಿಕ ನಿರ್ಧಾರವೊಂದನ್ನು ಪ್ರಕಟಿಸಿದ್ದಾರೆ.
ಜನಸಾಮಾನ್ಯರ ಕುಂದುಕೊರತೆಗಳನ್ನು ಆಲಿಸಿ, ಸ್ಥಳದಲ್ಲೇ ಪರಿಹಾರ ಒದಗಿಸುವ ಸಲುವಾಗಿ ರಾಜ್ಯದಲ್ಲಿ ಪ್ರತ್ಯೇಕವಾಗಿ ಪ್ರಜಾಸೇವೆ ಇಲಾಖೆ ಸೇವೆ ಬಗ್ಗೆ ಮಹತ್ವದ ಮಾಹಿತಿ ನೀಡಿದರು.
ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿಸ್ತೃತ ಮಾಹಿತಿ ನೀಡಿದ ಅವರು, ಜನರ ಸಮಸ್ಯೆಗಳನ್ನು ಆಲಿಸಲು, ಅವುಗಳನ್ನು ಬಗೆಹರಿಸಲು ಹಾಗೂ ಸರ್ಕಾರದ ಗಮನಕ್ಕೆ ತರಲು ಈ ಇಲಾಖೆ ಕೆಲಸ ಮಾಡಲಿದೆ.
ಇದರ ಸಂಪೂರ್ಣ ಜವಾಬ್ದಾರಿಯನ್ನು ಒಬ್ಬ ಸಚಿವರಿಗೆ ವಹಿಸಲಾಗುವುದು. ಇಲಾಖೆಯ ಉಸ್ತುವಾರಿಗಾಗಿ ಹಿರಿಯ ಐಎಎಸ್ ಅಧಿಕಾರಿಯೊಬ್ಬರನ್ನು ಕಾರ್ಯದರ್ಶಿಯಾಗಿ ನೇಮಕ ಮಾಡಲಾಗುವುದು, ಎಂದು ತಿಳಿಸಿದರು.
ಹೊಸ ಇಲಾಖೆಯ ನಿಯಮಾವಳಿಗಳ ಪ್ರಕಾರ, ರಾಜ್ಯದ ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರುಗಳು ತಿಂಗಳಲ್ಲಿ ಕಡ್ಡಾಯವಾಗಿ ಎರಡು ದಿನಗಳ ಕಾಲ ಜನಪ್ರತಿನಿಧಿಗಳೊಂದಿಗೆ ಸಾರ್ವಜನಿಕರ ಬಳಿಗೆ ಹೋಗಬೇಕು. ಪ್ರತಿ ತಿಂಗಳ ಮೊದಲ ಶನಿವಾರ ಮತ್ತು ಮೂರನೇ ಶನಿವಾರದಂದು ಮಂತ್ರಿಗಳು ಕಡ್ಡಾಯವಾಗಿ ಪ್ರಜಾಸೇವೆ ಮಾಡಬೇಕು.
ಒಂದು ವೇಳೆ ಆ ದಿನ ಸರ್ಕಾರಿ ರಜೆ ಇದ್ದರೆ ಮಾತ್ರ ಬೇರೆ ದಿನವನ್ನು ನಿಗದಿಪಡಿಸಿಕೊಳ್ಳಬಹುದು. ಮಂತ್ರಿಗಳು ತಮ್ಮ ಜಿಲ್ಲಾ ಪ್ರವಾಸದ ಸಂದರ್ಭದಲ್ಲಿ ಸ್ಥಳೀಯ ಶಾಸಕರನ್ನು ಜೊತೆಗೆ ಕರೆದುಕೊಂಡು ಜಂಟಿ ಸಭೆಗಳನ್ನು ನಡೆಸಬೇಕು.


