ಬಿಹಾರ : ಔರಂಗಾಬಾದ್ ಜಿಲ್ಲೆಯಲ್ಲಿ ಕಳ್ಳರು (thieves) ಕಳ್ಳತನಕ್ಕೆ ಬಳಸಿದ ತಂತ್ರ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಮನೆಯೊಳಗೆ ಪ್ರವೇಶಿಸುವ ಮೊದಲು ಸಾಕುನಾಯಿ (Dog) ಶಬ್ದ ಮಾಡದಂತೆ ಅದರ ಬಾಯಿಗೆ ಟೇಪ್ ಅಂಟಿಸಿ ಬಳಿಕ ಕಳ್ಳತನ ನಡೆಸಿದ್ದಾರೆ.
ಆಗಸ್ಟ್ 28 ರಂದು ಮಧ್ಯರಾತ್ರಿ ಭಾರಿ ಮಳೆ ಸುರಿಯುತ್ತಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ. ಮಳೆಯ ಸದ್ದು ಹಾಗೂ ಮನೆಯಲ್ಲಿದ್ದ ಕೂಲರ್‌ನ ಶಬ್ದದಿಂದ ಮನೆಯವರಿಗೆ ಕಳ್ಳರ ಚಲನವಲನ ತಿಳಿಯುವುದಿಲ್ಲ ಎಂಬುದನ್ನು ದುಷ್ಕರ್ಮಿಗಳು ಲೆಕ್ಕಾಚಾರ ಹಾಕಿದ್ದರು.
ಈ ಮನೆಯ ಮಾಲೀಕ ಅಲೋಕ್ ಸಿಂಗ್ ಮತ್ತು ಅವರ ಪತ್ನಿ ಮನೆಯಲ್ಲೇ ಮಲಗಿದ್ದರು. ಕುಟುಂಬದ ಇತರರು ಸಂಬಂಧಿಕರ ಮನೆಗೆ ತೆರಳಿದ್ದರು. ಇದನ್ನೇ ಅವಕಾಶ ಮಾಡಿಕೊಂಡ ಕಳ್ಳರು ಮೂರು ಕೊಠಡಿಗಳ ಬೀಗ ಒಡೆದು, ಎರಡು ಕಪಾಟು ಹಾಗೂ ಎರಡು ಕಬ್ಬಿಣದ ಟ್ರಂಕ್‌ಗಳನ್ನು ಜಾಲಾಡಿದ್ದಾರೆ.
ಸುಮಾರು 4 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು 40 ಸಾವಿರ ರೂ. ನಗದು ಕದ್ದೊಯ್ದಿದ್ದಾರೆ. ಬೆಳಗ್ಗೆ ವಿಷಯ ಬೆಳಕಿಗೆ ಬಂದ ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಮುಫಾಸಿಲ್ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿ ಆರೋಪಿಗಳ ಪತ್ತೆಗೆ ತನಿಖೆ ಆರಂಭಿಸಿ ದ್ದಾರೆ.


