ಕಲಬುರಗಿ: ಲೋಕಾಯುಕ್ತ ದಾಳಿಗೆ ಒಳಗಾದ ನಿವೃತ್ತ ಇಂಜಿನಿಯರ್ ಮಾಣಿಕ್ ಕನಕಟ್ಟಿ ಅವರ ಬ್ಯಾಂಕ್ ಲಾಕರ್ ನಲ್ಲಿ 2016ರಲ್ಲಿ ಅಮಾನ್ಯೀಕರಣಗೊಂಡ 1000 ರೂ. ಮುಖಬೆಲೆಯ 9 ಲಕ್ಷ ರೂ. ಬಂಡಲ್ ಗಳು ಪತ್ತೆಯಾಗಿವೆ.
ಕಲಬುರಗಿಯ ಸಂಗಮೇಶ್ವರ ಬಡಾವಣೆಯ ಎಸ್.ಬಿ.ಐ. ಶಾಖೆಯ ಲಾಕರ್ ನಲ್ಲಿ ಈ ನೋಟುಗಳ ಬಂಡಲ್ ಹಾಗೂ 20 ತೊಲ ಚಿನ್ನಾಭರಣ ಪತ್ತೆಯಾಗಿದೆ.
10 ವರ್ಷದ ಹಿಂದೆ ಅಮಾನ್ಯೀಕರಣಗೊಂಡ ನೋಟುಗಳು ಇಷ್ಟು ದಿನ ಇಟ್ಟಿದ್ದು ಏಕೆ ಎನ್ನುವುದು ಅಚ್ಚರಿ ಮೂಡಿಸಿದೆ.
ಲೋಕಾಯುಕ್ತ ದಾಳಿಯ ವೇಳೆ ನಿವೃತ್ತ ಅಧಿಕಾರಿಯ ಬ್ಯಾಂಕ್ ಲಾಕರ್ ನಲ್ಲಿ ಹಳೆಯ ನೋಟುಗಳು ಚಿನ್ನಾಭರಣ ಪತ್ತೆಯಾಗಿದೆ. ಆದಾಯ ಮೀರಿದ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಕಲಬುರಗಿ ವೃತ್ತದ ನಿವೃತ್ತ ಅಧೀಕ್ಷಕ ಅಭಿಯಂತರ ಮಾಣಿಕ್ ಕನಕಟ್ಟಿ ಅವರ ಮನೆಯ ಮೇಲೆ ಮಂಗಳವಾರ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು.
ಬುಧವಾರ ಕಲಬುರಗಿಯ ಸಂಗಮೇಶ್ವರ ಕಾಲೋನಿಯ ಎಸ್.ಬಿ.ಐ. ಬ್ಯಾಂಕ್ ನಲ್ಲಿರುವ ಅವರ ಲಾಕರ್ ಪರಿಶೀಲಿಸಿದಾಗ 1000 ರೂ. ಮುಖಬೆಲೆಯ 9 ಲಕ್ಷ ರೂ. ಹಳೆಯ ನೋಟುಗಳು, ಉಂಗುರ ಸೇರಿದಂತೆ 20 ತೊಲ ಚಿನ್ನಾಭರಣ ಪತ್ತೆಯಾಗಿದೆ.
ಕಲಬುರಗಿಯ ಗೋದುತಾಯಿ ನಗರದ ಎರಡು ಮನೆಗಳು, ಬೀದರ್ ಜಿಲ್ಲೆಯ ಹಳ್ಳಿಖೇಡಾ ಬಿ ಗ್ರಾಮದ ಮನೆ, ತೋಟಗಳು, ಹುಮ್ನಾಬಾದ್ ನಲ್ಲಿರುವ ಎರಡು ಕಾಂಪ್ಲೆಕ್ಸ್ ಗಳ ಮೇಲೆ ಮಂಗಳವಾರ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಪರಿಶೀಲಿಸಿದ್ದರು.


