ಬೆಂಗಳೂರು: ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಪೊಲೀಸರು ಭಾರಿ ಶಾಕ್ ನೀಡಿದ್ದಾರೆ. ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರು, ರಾಯಚೂರು, ಶಿವಮೊಗ್ಗ ಹಾಗೂ ಧಾರವಾಡ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಇಂದು ಮುಂಜಾನೆಯೇ ಏಕಕಾಲಕ್ಕೆ ದಾಳಿ ನಡೆಸಿ, ತೀವ್ರ ಪರಿಶೀಲನೆ ಕೈಗೊಂಡಿದ್ದಾರೆ.
ಬೆಂಗಳೂರು ಹಾಗೂ ಬೆಂಗಳೂರು ದಕ್ಷಿಣ ವ್ಯಾಪ್ತಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಭರ್ಜರಿ ಬೇಟೆಯಾಡಿದ್ದಾರೆ.
ಕುಂಬಳಗೂಡು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಬಿ.ಕೆ. ತಿಮ್ಮಯ್ಯ ಅವರ ಮನೆ ಮತ್ತು ಕಚೇರಿಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬೆಂಗಳೂರು ದಕ್ಷಿಣ ತಾಲೂಕಿನ ಕುಂಬಳಗೂಡು, ಮಾಗಡಿ ತಾಲೂಕಿನ ಬೆಳಗವಾಡಿ ಗ್ರಾಮ ಸೇರಿದಂತೆ ಒಟ್ಟು 3 ಕಡೆಗಳಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ.
ಸಂಬಂಧಿಕರ ಮನೆಗಳ ಮೇಲೂ ರೇಡ್: ಪಿಡಿಒ ತಿಮ್ಮಯ್ಯ ಅವರಿಗೆ ಸೇರಿದ ತೋಟದ ಮನೆ, ಅವರ ಅಣ್ಣ ರಾಮಚಂದ್ರಯ್ಯ ಹಾಗೂ ಅಕ್ಕನ ಮಗ ದಿಲೀಪ್ ಅವರ ಮನೆಗಳ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದರೊಂದಿಗೆ ಬೆಂಗಳೂರಿನ ಒಟ್ಟು ನಾಲ್ಕು ಕಡೆಗಳಲ್ಲಿ ಪರಿಶೀಲನೆ ಮುಂದುವರಿದಿದೆ.


