ತುರುವೇಕೆರೆ: ತಾಲ್ಲೂಕಿನ ದಬ್ಬೇಘಟ್ಟ ಹೋಬಳಿ ಕಡೇಹಳ್ಳಿ ಗ್ರಾಮದ ಶ್ರೀ ರಂಗನಾಥ ಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಅರ್ಧಕ್ಕೆ ನಿಂತಿದ್ದ ಸಮುದಾಯ ಭವನ ಕಾಮಗಾರಿಗೆ ಹಾಗೂ ಗ್ರಾಮದಲ್ಲಿನ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದ ನೂತನ ಕಾಮಗಾರಿಗೆ ತಲಾ 10 ಲಕ್ಷ ರೂ ಅನುದಾನ ಒದಗಿಸಿದ್ದಾರೆ.
ಕಡೇಹಳ್ಳಿ ಗ್ರಾಮದ ಶ್ರೀ ರಂಗನಾಥ ಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ನಿರ್ಮಾಣವಾಗುತ್ತಿದ್ದ ಸಮುದಾಯ ಭವನ ಕಾಮಗಾರಿಯು ಸ್ಥಗಿತಗೊಂಡು ಬಹಳ ವರ್ಷಗಳೇ ಕಳೆದಿದ್ದವು. ಈ ಕುರಿತಂತೆ “ಭಾರತ ವೈಭವ” ದಿನಪತ್ರಿಕೆ ಹಾಗೂ "Bv5 ನ್ಯೂಸ್" ವಿಶೇಷ ವರದಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ದೈವಭಕ್ತರಾದ ಶಾಸಕ ಎಂ.ಟಿ.ಕೃಷ್ಣಪ್ಪನವರು ಸಮುದಾಯ ಭವನದ ಕಾಮಗಾರಿ ಮುಂದುವರೆಸಲು 10 ಲಕ್ಷ ರೂ ಹಾಗೂ ಗ್ರಾಮದ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ 10 ಲಕ್ಷ ರೂ ಒಟ್ಟು 20 ಲಕ್ಷ ರೂಗಳ ಅನುದಾನವನ್ನು ಒದಗಿಸಿದ್ದಾರೆ.
ಕಡೇಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಅಧಿದೇವತೆಯಾದ ಶ್ರೀ ರಂಗನಾಥ ಸ್ವಾಮಿ ದೇವರು ನೆಲೆಸಿರುವ ಈ ಬೆಟ್ಟವನ್ನು ಕಡೇಹಳ್ಳಿ ಗುಡ್ಡ ಎಂದೇ ಪ್ರಸಿದ್ದಿಯಾಗಿದೆ. ಈ ಬೆಟ್ಟದಲ್ಲಿರುವ ಶ್ರೀ ರಂಗನಾಥಸ್ವಾಮಿಯನ್ನು ಕಾಣಲು ತಾಲೂಕಿನ ವಿವಿಧ ಗ್ರಾಮಗಳಿಂದ ಮಾತ್ರವಲ್ಲದೆ ಪರಸ್ಥಳದಿಂದಲೂ ಭಕ್ತಾಧಿಗಳು ಬರುತ್ತಾರೆ. ವೈಕುಂಠ ಏಕಾದಶಿ ಸೇರಿದಂತೆ ಹಬ್ಬಹರಿದಿನಗಳಲ್ಲಿ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಲಿದೆ. ಕಡೇಹಳ್ಳಿ ಗ್ರಾಮದ ಯಾವುದೇ ಕುಟುಂಬದಲ್ಲಿ ಶುಭಕಾರ್ಯ ನಡೆದರೂ ಮೊದಲ ಪೂಜೆ ಶ್ರೀ ರಂಗನಾಥಸ್ವಾಮಿಗೆ ಸಲ್ಲಿಸುವುದು ವಾಡಿಕೆಯಾಗಿದೆ. ಇಷ್ಟೊಂದು ಮಹತ್ವವಿರುವ ಶ್ರೀ ರಂಗನಾಥ ಸ್ವಾಮಿ ಬೆಟ್ಟವು ಭೂಮಿಯಿಂದ ಸಾವಿರಾರು ಅಡಿ ಎತ್ತರದಲ್ಲಿದ್ದು, ಬೆಟ್ಟದ ಮೇಲಿಂದ ಸುತ್ತಲೂ ನೋಡಿದರೆ ಸುಂದರ ಪ್ರಕೃತಿಯ ಸೊಬಗು ಕಾಣಿಸುತ್ತದೆ. ರಮ್ಯರಮಣೀಯ ಪ್ರಕೃತಿಯ ಪರಿಸರದಲ್ಲಿ ಸ್ವಾಮಿಯು ನೆಲೆಸಿದ್ದಾನೆ.
ಈ ಸುಕ್ಷೇತ್ರದ ಬೆಟ್ಟದ ತಪ್ಪಲಿನಲ್ಲಿ ಭಕ್ತರಿಗೆ, ನಾಗರೀಕರಿಗೆ ದಾಸೋಹ ಕಾರ್ಯಕ್ರಮ ನಡೆಸಲು, ದೇವರ ಕಾರ್ಯಗಳನ್ನು ನಡೆಸಲು ಅನುಕೂಲವಾಗುವ ಉದ್ದೇಶದಿಂದ ಸಮುದಾಯ ಭವನ ನಿರ್ಮಾಣ ಕೈಗೊಳ್ಳಲಾಗಿತ್ತು. ಆದರೆ ಕಾಮಗಾರಿ ಅಪೂರ್ಣಗೊಂಡು ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ಈ ಸಂಬಂಧ ಕಾಮಗಾರಿಗೆ ಜೀವ ಕೊಡುವ ಉದ್ದೇಶದಿಂದ ಪತ್ರಿಕೆ ವರದಿ ಮಾಡಿತ್ತು.
ವರದಿ: ಗಿರೀಶ್ ಕೆ ಭಟ್


