ನವದೆಹಲಿ: ಕೇಂದ್ರದ ನರೇಂದ್ರ ಮೋದಿ ಸರ್ಕಾರದಲ್ಲಿ ಶೀಘ್ರದಲ್ಲೇ ಭಾರಿ ಸಂಪುಟ ಪುನರಚನೆ ಮತ್ತು ಹೊಸ ಸಚಿವರ ಸೇರ್ಪಡೆಯಾಗುವ ಸಾಧ್ಯತೆಗಳು ದಟ್ಟವಾಗಿವೆ.
ಬಲ್ಲ ಮೂಲಗಳ ಮಾಹಿತಿಯಂತೆ, ಮುಂದಿನ ವಾರದಲ್ಲೇ ಕೇಂದ್ರ ಸಂಪುಟಕ್ಕೆ ಪ್ರಮುಖ ಶಸ್ತ್ರಚಿಕಿತ್ಸೆ ನಡೆಯಲಿದ್ದು, ಪ್ರಮುಖ ಇಲಾಖೆಗಳ ಜವಾಬ್ದಾರಿ ವಹಿಸಿಕೊಂಡಿರುವ ಸಚಿವರ ಖಾತೆಗಳಲ್ಲಿ ಬದಲಾವಣೆಯಾಗುವ ಲಕ್ಷಣಗಳು ಕಂಡುಬರುತ್ತಿವೆ.
ಪ್ರಮುಖವಾಗಿ ಕೇಂದ್ರ ಶಿಕ್ಷಣ ಇಲಾಖೆಗೆ ನೂತನ ಹಾಗೂ ಯುವ ನಾಯಕತ್ವವನ್ನು ಹುಡುಕುವ ಪ್ರಕ್ರಿಯೆ ಬಿರುಸಿನಿಂದ ಸಾಗುತ್ತಿದೆ.
ಇದೇ ವೇಳೆ, 70 ವರ್ಷ ದಾಟಿರುವ ಸುಮಾರು 14 ಪ್ರಭಾವಿ ಕೇಂದ್ರ ಸಚಿವರಿಗೆ ಸಂಪುಟದಿಂದ ಕೋಕ್ ನೀಡುವ ಸಾಧ್ಯತೆಯಿದೆ.
ಇಂತಹ ಹಿರಿಯ ನಾಯಕರನ್ನು ಕೇಂದ್ರ ಸರ್ಕಾರದಿಂದ ಬಿಡುಗಡೆಗೊಳಿಸಿ, ಪಕ್ಷದ ಸಂಘಟನೆಗೆ ಅಥವಾ ಮುಂಬರುವ ರಾಜ್ಯಗಳ ವಿಧಾನಸಭೆ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ರಾಜಕೀಯಕ್ಕೆ ನಿಯೋಜಿಸಲು ಹೈಕಮಾಂಡ್ ನಿರ್ಧರಿಸಿದೆ ಎನ್ನಲಾಗಿದೆ.


