ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಸಾರ್ವಜನಿಕ ಜೀವನದಲ್ಲಿ 25 ಯಶಸ್ವಿ ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ, ನವದೆಹಲಿಯ ಇಂದಿರಾ ಗಾಂಧಿ ಇಂಡೋರ್ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದ್ದ 'ವಿಕಸಿತ ಭಾರತ ಸಂಕಲ್ಪ ಸೇವಾ' ಕಾರ್ಯಕ್ರಮದಲ್ಲಿ ದೇಶದಾದ್ಯಂತ ಭಾಗವಹಿಸಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಈ ಸಭೆಯಲ್ಲಿ ಕಾರ್ಯಕರ್ತರನ್ನು ಉತ್ತೇಜಿಸಿದ ಪ್ರಧಾನಿಗಳು, "ನಾವೆಲ್ಲರೂ ಸೇರಿ ಒಗ್ಗಟ್ಟಾಗಿ ಕೆಲಸ ಮಾಡೋಣ, We Will Do It" ಎಂದು ಕರೆ ನೀಡಿದರು.
ಜನಸೇವೆಯೇ ಜನಾರ್ದನ ಸೇವೆ: ನಿರಂತರ ಸೇವೆಯ ಮೂಲಕ 25 ವರ್ಷಗಳನ್ನು ಪೂರೈಸಿರುವುದು ತಮ್ಮ ಸೌಭಾಗ್ಯ ಎಂದ ಮೋದಿ, "ದೇಶದ ಜನತೆ ನನ್ನನ್ನು ಜನಸೇವೆಗಾಗಿ ಆಯ್ಕೆ ಮಾಡಿದ್ದಾರೆ. ಜನತಾ ಜನಾರ್ದನ ನಮಗೆ ಪರಮಾತ್ಮನ ರೂಪ. ಇಂದು ಸಹ ನಾನು ಒಬ್ಬ ವಿದ್ಯಾರ್ಥಿಯಾಗಿಯೇ ನಡೆದುಕೊಳ್ಳುತ್ತೇನೆ ಹಾಗೂ ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ನನ್ನ ಶಿರಸಾ ಸಾಷ್ಟಾಂಗ ವಂದನೆಗಳನ್ನು ಸಲ್ಲಿಸುತ್ತೇನೆ. ಇಂದು ದೇವಸ್ಥಾನದಲ್ಲಿ ನನ್ನ ಕಲಿಯುವ ಆಸಕ್ತಿ ಯಾವತ್ತೂ ಕಡಿಮೆಯಾಗಬಾರದು ಹಾಗೂ ನಾನು ಕಲಿಯುವ ಪ್ರತಿಯೊಂದನ್ನೂ ದೇಶದ ಸೇವೆಗೆ ಬಳಸುವಂತಾಗಲಿ ಎಂದು ಪ್ರಾರ್ಥಿಸಿದ್ದೇನೆ" ಎಂದು ಭಾವನಾತ್ಮಕವಾಗಿ ನುಡಿದರು.


