ಕಠ್ಮಂಡು: ನೇಪಾಳದ ಭೋಟೆ ಕೋಶಿ ನದಿಯಲ್ಲಿ ಸಂಭವಿಸಿದ ಭೀಕರ ಹಠಾತ್ ಪ್ರವಾಹದ ಹಿನ್ನೆಲೆಯಲ್ಲಿ ವಿಪತ್ತು ನಿರ್ವಹಣೆ ಮತ್ತು ಪರಿಹಾರ ಕಾರ್ಯಾಚರಣೆಗಳಿಗೆ ನೆರವಾಗಲು ಅಮೆರಿಕದ ವಿದೇಶಾಂಗ ಇಲಾಖೆ 5 ಲಕ್ಷ ಅಮೆರಿಕನ್ ಡಾಲರ್‌ಗಳ ತುರ್ತು ಮಾನವೀಯ ನೆರವನ್ನು ಘೋಷಿಸಿದೆ.
ವಕ್ತಾರರ ಕಚೇರಿ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯಲ್ಲಿ, ಈ ದುರಂತದಿಂದ ಮೃತಪಟ್ಟವರು ಹಾಗೂ ಸಂತ್ರಸ್ತ ಕುಟುಂಬಗಳಿಗೆ ಅಮೆರಿಕ ಸರ್ಕಾರ ತೀವ್ರ ಸಂತಾಪ ಸೂಚಿಸಿದೆ.
5ಲಕ್ಷ ಡಾಲರ್‌ಗಳ ಈ ನೆರವನ್ನು ಅಮೆರಿಕದ ಜಾಗತಿಕ ಪಾಲುದಾರ ಸಂಸ್ಥೆಯಾದ ಕ್ಯಾಥೊಲಿಕ್ ರಿಲೀಫ್ ಸರ್ವಿಸಸ್ (CRS) ಮೂಲಕ ಬಳಸಿಕೊಳ್ಳಲಾಗುವುದು.
ಪ್ರವಾಹದಿಂದ ತೀವ್ರವಾಗಿ ಹಾನಿಗೊಳಗಾದ ಪ್ರದೇಶಗಳ ಜನರಿಗೆ ತುರ್ತು ಆಶ್ರಯ, ಅಗತ್ಯ ಪರಿಹಾರ ಸಾಮಗ್ರಿಗಳು ಹಾಗೂ ನೀರು, ನೈರ್ಮಲ್ಯ ಮತ್ತು ಸ್ವಚ್ಛತೆ (WASH) ನೆರವನ್ನು ಒದಗಿಸಲು ಈ ಹಣವನ್ನು ಬಳಸಲಾಗುತ್ತದೆ.
ನೆಲಮಟ್ಟದ ಪರಿಹಾರ ಕಾರ್ಯಗಳಿಗೆ ಮತ್ತಷ್ಟು ಬಲ ನೀಡುವ ಉದ್ದೇಶದಿಂದ, ತಕ್ಷಣದ ಪರಿಹಾರ ಕಾರ್ಯಾಚರಣೆಗಳ ಸಮನ್ವಯದಲ್ಲಿ ಸ್ಥಳೀಯ ಅಧಿಕಾರಿಗಳಿಗೆ ನೆರವಾಗಲು ಅಮೆರಿಕದ ವಿದೇಶಾಂಗ ಇಲಾಖೆ ವಿಪತ್ತು ನಿರ್ವಹಣಾ ಸಲಹೆಗಾರರೊಬ್ಬರನ್ನು ಈ ಪ್ರದೇಶಕ್ಕೆ ನಿಯೋಜಿಸುತ್ತಿದೆ.
ಇದೇ ವೇಳೆ, ಪ್ರವಾಹ ಪೀಡಿತ ಪ್ರದೇಶಗಳಲ್ಲಿರುವ ಅಮೆರಿಕ ನಾಗರಿಕರನ್ನು ಪತ್ತೆಹಚ್ಚಿ, ಅವರಿಗೆ ಅಗತ್ಯ ನೆರವು ಒದಗಿಸಲು ಕಠ್ಮಂಡುವಿನಲ್ಲಿರುವ ಅಮೆರಿಕ ರಾಯಭಾರ ಕಚೇರಿ ನೇಪಾಳದ ಭದ್ರತಾ ಪಡೆಗಳು ಹಾಗೂ ಸ್ಥಳೀಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುತ್ತಿದೆ.
ತುರ್ತು ನೆರವು ಅಗತ್ಯವಿರುವ ಅಮೆರಿಕ ನಾಗರಿಕರು [email protected] ಮೂಲಕ ಸಂಪರ್ಕಿಸುವಂತೆ ರಾಯಭಾರ ಕಚೇರಿ ಮನವಿ ಮಾಡಿದೆ. ಅಲ್ಲದೆ, ಸ್ಥಳೀಯ ಅಧಿಕಾರಿಗಳು ನೀಡುವ ಸುರಕ್ಷತಾ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಹಾಗೂ ಸ್ಮಾರ್ಟ್ ಟ್ರಾವೆಲರ್ ಎನ್‌ರೋಲ್‌ಮೆಂಟ್ ಪ್ರೋಗ್ರಾಂ (STEP)ನಲ್ಲಿ ನೋಂದಾಯಿಸಿಕೊಳ್ಳುವಂತೆ ಸೂಚಿಸಿದೆ.
157 ಮೃತದೇಹಗಳು ಪತ್ತೆ
ನೇಪಾಳದ ಅಧಿಕಾರಿಗಳು 157 ಮೃತದೇಹಗಳನ್ನು ಪತ್ತೆಹಚ್ಚಿದ್ದಾರೆ. ಇದೇ ವೇಳೆ, ಟಿಬೆಟ್‌ನಲ್ಲಿ ಗಡಿ ಕೇಂದ್ರವೊಂದಕ್ಕೆ ಮಣ್ಣಿನ ಕುಸಿತ ಅಪ್ಪಳಿಸಿದ ಬಳಿಕ ಮೂರು ಮಂದಿ ಮೃತಪಟ್ಟಿರುವುದಾಗಿ ಚೀನಾದ ಅಧಿಕಾರಿಗಳು ತಿಳಿಸಿದ್ದಾರೆ.
ಇದರೊಂದಿಗೆ ಒಟ್ಟು ಸಾವಿನ ಸಂಖ್ಯೆ 160ಕ್ಕೆ ಏರಿಕೆಯಾಗಿದೆ. ಆದರೆ, ಪ್ರವಾಹದ ನೀರು ಮತ್ತು ಅವಶೇಷಗಳಿಂದ ಸಂಪರ್ಕ ಕಡಿತಗೊಂಡಿರುವ ಪ್ರದೇಶಗಳಿಗೆ ರಕ್ಷಣಾ ಕಾರ್ಯಾಚರಣೆ ತಂಡಗಳು ತಲುಪುತ್ತಿರುವುದರಿಂದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.ಈ ದುರಂತದ ಬಳಿಕ ನೂರಾರು ಪ್ರವಾಸಿಗರು ಇನ್ನೂ ನಾಪತ್ತೆಯಾಗಿದ್ದಾರೆ.


