ವಿಜಯನಗರ :ಜಿಲ್ಲೆ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಲ್ ನಿರ್ಮಾಣ ವಿಚಾರ ಇದೀಗ ದಲಿತ ಸಮುದಾಯದ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಹಲವು ದಶಕಗಳಿಂದ ಅಂಬೇಡ್ಕರ್ ಸರ್ಕಲ್ ನಿರ್ಮಾಣಕ್ಕೆ ಆಗ್ರಹಿಸುತ್ತಿದ್ದ ದಲಿತ ಸಂಘಟನೆಗಳು, ಈ ವರ್ಷ ಅಂಬೇಡ್ಕರ್ ಜಯಂತಿಯ ಎರಡು ವಾರಗಳ ಮುಂಚಿತವಾಗಿ ನಡೆದ ಭೂಮಿ ಪೂಜೆಯನ್ನು “ರಾಜಕೀಯ ಗಿಮಿಕ್” ಎಂದು ಆರೋಪಿಸಿವೆ.
ರಾಮನಗರ ಪೊಲೀಸ್ ಠಾಣೆ ಸಮೀಪದಲ್ಲಿ ನಿರ್ಮಾಣವಾಗಬೇಕಿರುವ ಅಂಬೇಡ್ಕರ್ ಸರ್ಕಲ್‌ಗೆ 50 ಲಕ್ಷ ರೂಪಾಯಿ ಅನುದಾನ ಮಂಜೂರಾಗಿದೆ ಎಂದು ಹೇಳಿ ಭೂಮಿ ಪೂಜೆ ನೆರವೇರಿಸಿದ ಹಾಲಿ ಶಾಸಕರಾದ ಕೆ. ನೇಮಿರಾಜ್ ನಾಯ್ಕ ವಿರುದ್ಧ ದಲಿತ ಸಂಘಟನೆಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ. ಅನುದಾನ ಯಾವ ಇಲಾಖೆಯಿಂದ ಬಂದಿದೆ, ಯಾವ ಯೋಜನೆಯಡಿ ಕಾಮಗಾರಿ ನಡೆಯುತ್ತಿದೆ ಹಾಗೂ ಗುತ್ತಿಗೆದಾರರು ಯಾರು ಎಂಬ ಪ್ರಶ್ನೆಗಳಿಗೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
“20 ವರ್ಷಗಳ ಕಾಲ ಎಸ್‌ಸಿ ಮೀಸಲು ಕ್ಷೇತ್ರದಿಂದ ರಾಜಕೀಯ ಸೌಲಭ್ಯಗಳನ್ನು ಪಡೆದು ಅಧಿಕಾರ ಅನುಭವಿಸಿದವರು, ಅಂಬೇಡ್ಕರ್ ಅವರ ಹೆಸರಿನ ಸರ್ಕಲ್ ನಿರ್ಮಾಣಕ್ಕೆ ಇಷ್ಟು ವರ್ಷ ಯಾಕೆ ಕಾಯಬೇಕಾಯಿತು?” ಎಂಬ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ದಲಿತ ಸಂಘಟನೆಗಳು ಕೇಳುತ್ತಿರುವ ಪ್ರಮುಖ ಪ್ರಶ್ನೆಗಳು ಹೀಗಿವೆ:
50 ಲಕ್ಷ ರೂ. ಅನುದಾನ ನಿಜವಾಗಿಯೂ ಮಂಜೂರಾಗಿದೆಯೇ?
ಯಾವ ಇಲಾಖೆಯಡಿ ಕಾಮಗಾರಿ ನಡೆಯುತ್ತಿದೆ?
ಟೆಂಡರ್ ಪ್ರಕ್ರಿಯೆ ನಡೆದಿದೆಯೇ?
ಟೆಂಡರ್ ಪ್ರತಿಯನ್ನು ಕೇಳಿದಾಗ ಯಾಕೆ ನೀಡಲಾಗುತ್ತಿಲ್ಲ?
ಕಾಮಗಾರಿ ಸ್ಥಳದಲ್ಲಿ ಇಲಾಖೆಯ ನಾಮಫಲಕ ಯಾಕಿಲ್ಲ?ಅಂಬೇಡ್ಕರ್ ಸಂವಿಧಾನದ ಆಶಯಗಳನ್ನು ಮಾತಿನಲ್ಲಿ ಮಾತ್ರ ಹೊಗಳಿ, ಕಾರ್ಯರೂಪಕ್ಕೆ ತರದಿರುವುದು ಯಾಕೆ?
ಪ್ರತಿಭಟನಾಕಾರರು ಮಾತನಾಡಿ, “ಅಂಬೇಡ್ಕರ್ ಅವರ ಹೆಸರನ್ನು ರಾಜಕೀಯ ಲಾಭಕ್ಕಾಗಿ ಬಳಸಬಾರದು. ಅದು ದಲಿತ ಸಮುದಾಯದ ಆತ್ಮಗೌರವದ ಸಂಕೇತ. ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಗೌರವವನ್ನು ಜಾರಿಗೆ ತರುವುದೇ ಅಂಬೇಡ್ಕರ್ ಅವರಿಗೆ ನಿಜವಾದ ಗೌರವ” ಎಂದು ಪ್ರತಿಭಟನೆಯಲ್ಲಿ ವಿವಿಧ ದಲಿತ ಪರ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಎಸ್‌ಸಿ ಘಟಕದ ಪದಾಧಿಕಾರಿಗಳು ಹಾಗೂ ಡಿಎಸ್‌ಎಸ್ ತಾಲೂಕು ಅಧ್ಯಕ್ಷ ಪರಶುರಾಮ್ ಹೆಗ್ಡಳ್ ಸೇರಿದಂತೆ ಮರಿಯಪ್ಪ ದಸಮಾಪುರ, ರಾಮೇಶ್ ಚಿಂತ್ರಪಳ್ಳಿ, ಬಾಸವರಾಜ್ ಕಾಳಿ, ಪಕ್ಕೀರಪ್ಪ ಕಡ್ಲಬಾಳು, ಕೊಟೆಪ್ಪ ದೂಪದಹಳ್ಳಿ, ನಾಗರಾಜ್ ಕಲ್ಲಹಳ್ಳಿ, ಮೈಲಪ್ಪ ಕೋಗಳಿ, ರಾಮೇಶ್ ಪೂಜಾರ್, ಬಸವರಾಜ್ ಕೆಚ್ಚಿನಬಂಡಿ, ಗೋಣೆಪ್ಪ ಕೆಚ್ಚಿನಬಂಡಿ ಮತ್ತಿತರರು ಭಾಗವಹಿಸಿದ್ದರು.
“ಈ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಸಿಗುವವರೆಗೂ ಹೋರಾಟ ನಿಲ್ಲುವುದಿಲ್ಲ” ಎಂದು ದಲಿತ ಸಂಘಟನೆಗಳು ಎಚ್ಚರಿಕೆ ನೀಡಿವೆ.
ವರದಿ: ಎಂ ಮಂಜುನಾಥ್


