ಮೊಳಕಾಲ್ಮುರು: ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪಿಎಸ್ ಐ ಮಹೇಶ್ ಲಕ್ಷ್ಮಣ್ ಹೊಸಪೇಟೆ ಹೆಲ್ಮೆಟ್ ಇಲ್ಲದೆ ಸಿಕ್ಕಿಬಿದ್ದ ಸವಾರರಿಗೆ ಕೇವಲ ದಂಡ ವಿಧಿಸುವ ಬದಲು ಸ್ಥಳದಲ್ಲೇ ಹೆಲ್ಮೆಟ್ ಖರೀದಿಸಿ ಧರಿಸುವ ಅವಕಾಶ ಕಲ್ಪಿಸಿದರು.
ಮೊಳಕಾಲ್ಮುರು: ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ದಂಡ ವಿಧಿಸುವ ಬದಲು ಹೆಲ್ಮೆಟ್ ಖರೀದಿಸಲು ಅವಕಾಶ ನೀಡುವ ಮೂಲಕ ಮೊಳಕಾಲ್ಮುರು ಪೊಲೀಸರು ಜನಸ್ನೇಹಿ ಕ್ರಮ ಕೈಗೊಂಡಿದ್ದಾರೆ. ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಕೈಗೊಂಡ ಈ ವಿಶೇಷ ಅಭಿಯಾನಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದೆ ಸಂಚರಿಸುತ್ತಿರುವುದು ಅಪಘಾತಗಳಲ್ಲಿ ಸಾವಿನ ಪ್ರಮಾಣ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ. ಇದನ್ನು ಮನಗಂಡ ಪಿಎಸ್ ಐ ಮಹೇಶ್ ಲಕ್ಷ್ಮಣ್ ಹೊಸಪೇಟೆ ಹೆಲ್ಮೆಟ್ ಇಲ್ಲದೆ ಸಿಕ್ಕಿಬಿದ್ದ ಸವಾರರಿಗೆ ಕೇವಲ ದಂಡ ವಿಧಿಸುವ ಬದಲು ಸ್ಥಳದಲ್ಲೇ ಹೆಲ್ಮೆಟ್ ಖರೀದಿಸಿ ಧರಿಸುವ ಅವಕಾಶ ಕಲ್ಪಿಸಿದರು.
ಈ ವೇಳೆ ಸಾಕಷ್ಟು ವಾಹನ ಸವಾರರು ಹೆಲ್ಮೆಟ್ ಖರೀದಿಸಿ ಧರಿಸಿದ್ದು, ರಸ್ತೆ ಸುರಕ್ಷತೆಯ ಮಹತ್ವವನ್ನು ಅರಿತುಕೊಂಡರು. ಪೊಲೀಸರ ಈ ಕ್ರಮವು ದಂಡಕ್ಕಿಂತ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಿನಲ್ಲಿ ಸಂಚಾರ ನಿಯಮ ಪಾಲನೆಯ ಜೊತೆಗೆ ಜೀವ ರಕ್ಷಣೆಯ ಅರಿವು ಮೂಡಿಸುವ ಪೊಲೀಸರ ಈ ವಿನೂತನ ಪ್ರಯತ್ನಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ವರದಿ : ಪಿಎಂ ಗಂಗಾಧರ


