ಗದಗ: ಬೆಟಗೇರಿ ಅವಳಿ ನಗರದಲ್ಲಿ ಬಡವರ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಕಾಳಸಂತೆಯಲ್ಲಿ ಮಾರಾಟ ಹಾಗೂ ವಿವಿಧ ಜಿಲ್ಲೆಗಳು ಮತ್ತು ಹೊರರಾಜ್ಯಗಳಿಗೆ ಸಾಗಾಟ ಮಾಡುತ್ತಿರುವ ಅಕ್ರಮ ಜಾಲದ ವಿರುದ್ಧ ತುರ್ತು ಹಾಗೂ ಕಠಿಣ ಕ್ರಮ ಕೈಗೊಳ್ಳುವಂತೆ ಗದಗ ಪಟ್ಟಣದ ಜಿಲ್ಲಾಡಳಿತ ಭವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಜಿಲ್ಲಾ ಘಟಕದ ವತಿಯಿಂದ ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು
ಮನವಿ ಸಲ್ಲಿಸಿ ಕರವೇ ಸ್ವಾಭಿಮಾನಿ ಸೇನೆ ಜಿಲ್ಲಾಧ್ಯಕ್ಷರು ಶರಣು ಎಸ್ ಗೋಡಿ ಮಾತನಾಡಿ ಸರ್ಕಾರ ಬಡಜನರ ಹಸಿವು ನೀಗಿಸಲು ಉಚಿತವಾಗಿ ನೀಡುತ್ತಿರುವ ಪಡಿತರ ಅಕ್ಕಿಯನ್ನು ಕೆಲವು ಅಕ್ರಮ ದಂಧೆಕೋರರು ಗ್ರಾಮ ಹಾಗೂ ನಗರ ಪ್ರದೇಶಗಳ ಮನೆ ಮನೆಗೆ ತೆರಳಿ ಅತೀ ಕಡಿಮೆ ದರಕ್ಕೆ ಖರೀದಿ ಮಾಡಿ, ಬಳಿಕ ದೊಡ್ಡ ಮಟ್ಟದಲ್ಲಿ ಸಂಗ್ರಹಿಸಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದರು
ಅಕ್ರಮವಾಗಿ ಸಂಗ್ರಹಿಸಲಾದ ಪಡಿತರ ಅಕ್ಕಿಯನ್ನು 6 12 14 ಹಾಗೂ 16 ಚಕ್ರದ ಲಾರಿಗಳ ಮೂಲಕ ಹಾವೇರಿ ಹುಬ್ಬಳ್ಳಿ ಮಂಡ್ಯ ಮಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳು ಹಾಗೂ ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಿಗೆ ಸಾಗಾಟ ಮಾಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು
ಹಲವಾರು ವರ್ಷಗಳಿಂದ ನಡೆಯುತ್ತಿರುವ ಈ ಅಕ್ರಮ ದಂಧೆಯನ್ನು ತಡೆಗಟ್ಟುವಲ್ಲಿ ಸಂಬಂಧಪಟ್ಟ ಆಹಾರ ಇಲಾಖೆ ಪೊಲೀಸ್ ಇಲಾಖೆ ಹಾಗೂ ಅಧಿಕಾರಿಗಳು ವಿಫಲರಾಗಿದ್ದಾರೆ ಕೆಲ ಅಧಿಕಾರಿಗಳು ದಂಧೆಕೋರರ ಜೊತೆಗೆ ಶಾಮೀಲಾಗಿದ್ದಾರೆ ಎಂಬ ಸಾರ್ವಜನಿಕ ಆರೋಪಗಳು ಕೇಳಿಬರುತ್ತಿದ್ದು ಇದರ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು
ಮನವಿ ಮೂಲಕ ಅಕ್ರಮ ಪಡಿತರ ಅಕ್ಕಿ ಸಂಗ್ರಹ ಹಾಗೂ ಸಾಗಾಟದ ವಿರುದ್ಧ ವಿಶೇಷ ದಾಳಿ ನಡೆಸಬೇಕು ದಂಧೆಕೋರರನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಸಂಬಂಧಪಟ್ಟ ಅಧಿಕಾರಿಗಳ ಪಾತ್ರದ ಕುರಿತು ತನಿಖೆ ನಡೆಸಬೇಕು ಜಿಲ್ಲೆಯಾದ್ಯಂತ ಚೆಕ್‌ಪೋಸ್ಟ್ ಹಾಗೂ ವಿಶೇಷ ನಿಗಾ ವ್ಯವಸ್ಥೆ ಜಾರಿಗೊಳಿಸಬೇಕು ಬಡವರ ಪಾಲಿನ ಪಡಿತರ ಅಕ್ಕಿ ಕಾಳಸಂತೆಗೆ ಹೋಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು
ಕೂಡಲೇ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಗದಗ ತಾಲೂಕು ಹಾಗೂ ಗದಗ ಬೆಟಗೇರಿ ಅವಳಿ ನಗರದಲ್ಲಿ ಉಗ್ರ ಹೋರಾಟ ಪ್ರತಿಭಟನೆ ಹಾಗೂ ಸಾರ್ವಜನಿಕ ಜಾಗೃತಿ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು
ಮನವಿ ಸಮಯದಲ್ಲಿ ಕರವೇ ಸ್ವಾಭಿಮಾನಿ ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ವಡವಿ ಜಿಲ್ಲಾ ರೈತ ಘಟಕದ ಅಧ್ಯಕ್ಷ ಮುತ್ತಣ್ಣ ಮುಂಡವಾಡ ಜಿಲ್ಲಾ ಕಾರ್ಯದರ್ಶಿ ಅಶ್ಫಾಕ್ ಬಾಗೋಡಿ ಹಾಗೂ ಲತೀಫ್ ಶಿರಹಟ್ಟಿ ಜಿಲ್ಲಾ ಯುವ ಘಟಕದ ಅಧ್ಯಕ್ಷ ಪವನ್ ಕುಮಾರ್ ಕರಿನಾಯಕರ ಶಿರಹಟ್ಟಿ ತಾಲೂಕು ಅಧ್ಯಕ್ಷ ವಿರೇಶ ಪ್ರಸಾರದ ಲಕ್ಷ್ಮೇಶ್ವರ ತಾಲೂಕು ಅಧ್ಯಕ್ಷ ನಾಗೇಶ ಅಮರಾಪುರ ನರಗುಂದ ತಾಲೂಕು ಅಧ್ಯಕ್ಷ ವಿನಾಯಕ ಚತ್ರಬಾವಿ ಗದಗ ಬೆಟಗೇರಿ ಅಧ್ಯಕ್ಷ ಇಸ್ಮಾಯಿಲ್ ಉಮಚಗಿ ಮಾತೇಂಶ ಮಣಕವಾಡ ಪ್ರವೀಣ ಆಚಾರಿ ದೇವೇಂದ್ರ ಶಿಂದೆ ಕೈಸರ್ ಮೊಹಮ್ಮದಅಲಿ ಸೋಹೈಲ್ ನದಾಪ್ ಮಹಾಂತೇಶ ಉಮಚಗಿ ಹಜರತ್ ಮನಿಯಾರ ಇಮ್ರಾನ್ ಭಾವಿಕಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು..
ವರದಿ : ಅಣ್ಣಪ್ಪ ಗುತ್ತೆಮ್ಮನವರ


